Shobha Karndlaje

Untitled-2

BJP Karnataka

ಸ್ವದೇಶಿ ವಿಚಾರ ಧಾರೆ ದೇಶಕ್ಕೆ ಅನಿವಾರ್ಯ

ಕಳೆದ ಬಾರಿ ನಾನು ಗೋಹತ್ಯೆ ನಿಷೇಧದ ಬಗ್ಗೆ ಬರೆದಿದ್ದೆ. ನನ್ನ ಕಳಕಳಿ ಇಷ್ಟೇ ಆಗಿತ್ತು, ನಮ್ಮ ಗೋವನ್ನು ನಾವು ಉಳಿಸಿಕೊಂಡರೆ ರೈತ ಉಳಿಯುತ್ತಾನೆ. ಅದರ ಮುಖಾಂತರ ನಾವು ಉಳಿಯುತ್ತೇವೆ ಎಂಬುದು. ನಮ್ಮ ತಳಿಗಳು ನಮ್ಮ ದೇಶದ ಯಾವುದೇ ಹವಾಗುಣಕ್ಕೆ ಹೊಂದಿಕೊಳ್ಳುತ್ತವೆ. ಅತಿಯಾದ ಚಳಿ, ವಿಪರೀತ ಮಳೆ, ಒಣ ಬಿಸಿಲು ಇದೆಲ್ಲಕ್ಕೂ ಒಗ್ಗುವ ಗೋವುಗಳು ಮತ್ತು ಸಸ್ಯ ಪ್ರಬೇಧಗಳು ನಮ್ಮಲ್ಲಿವೆ. ಔಷಧಿಯಾಗಬಲ್ಲ ಈ ತಳಿಗಳನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಕೂಡ. ಮೊನ್ನೆ ನಾನು ಸ್ವದೇಶಿ ಭತ್ತದ ತಳಿಗಳ ಉತ್ಸವದಲ್ಲಿ ಭಾಗವಹಿಸಿದ್ದೆ. ನನ್ನ ಮನಸ್ಸಿಗೆ ಹತ್ತಿರವಾದ ವಿಷಯ ಇದು. ಅಲ್ಲಿ ಚರ್ಚೆಯಾದ ಅಂಶಗಳು ಸ್ವದೇಶೀ ತಳಿಗಳ ಅನಿವಾರ್ಯತೆಯನ್ನು ನನ್ನ ಮನಸ್ಸಲ್ಲಿ ಇನ್ನಷ್ಟು ಧೃಡಗೊಳಿಸಿದವು. ನಮ್ಮ ಹಿರಿಯರು ಕಂಡುಕೊಂಡ ಸತ್ಯ ತೂಗಿ, ಅಳೆದು ಪ್ರಾಯೋಗಿಕವಾಗಿ ಮಾಡಿರುವಂತಹದು. ಆಗ ಇಷ್ಟೊಂದು ವಿಜ್ಞಾನ ಬೆಳೆದಿರಲಿಲ್ಲ ಅನ್ನುವುದು ನಮ್ಮ ಅಪ್ರಬುದ್ದತೆಯೇನೋ ಅನ್ನಿಸುತ್ತದೆ. ಯಾವ ವಾತಾವರಣದಲ್ಲಿ ಯಾವ ಬೆಳೆ ಬೆಳೆಯಬೇಕು, ಯಾವ ಬೀಜ ಯಾವಾಗ ಹಾಕಬೇಕು, ಅದಕ್ಕೆ ಎಷ್ಟು ನೀರು ಹಾಯಿಸಬೇಕು, ಯಾವಾಗ ಗೊಬ್ಬರ ಹಾಕಬೇಕು ಎಂಬುದು ಕೃಷಿ ವಿಜ್ಞಾನಿಗಳು, MSc. PhD (Agri.), ಆಗದೆ ಇದ್ದ ನಮ್ಮ ಹಿರಿಯರು ಕೃಷಿಯ ಸತ್ಯವನ್ನು ಕಂಡುಕೊಂಡಿದ್ದರು. ಅದರಂತೆ ಎಲ್ಲಾರೀತಿಯ ಬೆಳೆಗಳನ್ನು ಬೆಳೆಯುತ್ತಿದ್ದರು.

ಸದಾ ನೆರೆ ಬರುವ ಪ್ರದೇಶಕ್ಕೆ 38 ದಿನ ನೀರು ನಿಂತರೂ ಕೊಳೆಯದೇ ಇರುವ ತಳಿಯನ್ನು ಕಂಡು ಹಿಡಿದು ಬಳಸುತ್ತಿದ್ದರು, ಬೆಳೆಸುತ್ತಿದ್ದರು. ಬರಗಾಲ ಪ್ರದೇಶಕ್ಕೆ ನೀರು ಕಡಿಮೆಯಿದ್ದರೂ ಬದುಕುವ ತಳಿಯನ್ನು ಬಳಸುತ್ತಿದ್ದರು. ನಮ್ಮ ದೇಶದಲ್ಲಿ ಎಲ್ಲಾ ಕಾಲಕ್ಕೂ, ಎಲ್ಲಾ ಹವಾಗುಣಕ್ಕೂ ಒಗ್ಗುವ ಸುಮಾರು 1200 ಭತ್ತದ ತಳಿಗಳಿದ್ದವು ಎಂದು ತಜ್ಞರು ಹೇಳುತ್ತಾರೆ. ಆದರೆ ವೈಜ್ಞಾನಿಕತೆಯನ್ನು ಭರವಾಗಿ ಅಪ್ಪಿಕೊಂಡ ನಾವು ಈಗ ಕೇವಲ 360 ತಳಿಗಳನ್ನು ಮಾತ್ರ ಉಳಿಸಿಕೊಳ್ಳಲು ಸಾಧ್ಯವಾಗಿದೆ. ಆ ಸಾಧನೆಯೂ ಕೃಷಿ ವಿಜ್ಞಾನಿಗಳದ್ದಲ್ಲ. ಕೃಷಿ ವಿಶ್ವವಿದ್ಯಾನಿಲಯಗಳದ್ದು ಅಲ್ಲ; ಅದು ನಮ್ಮ ರೈತರದ್ದು. ನಮ್ಮ ನಾಡಿನ ರೈತರು ಈ ಎಲ್ಲಾ ತಳಿಗಳನ್ನು ಉಳಿಸಿಕೊಂಡಿದ್ದಾರೆ. ಹಲವಾರನ್ನು ತಮ್ಮ ಗದ್ದೆಗಳಲ್ಲಿ ಬೆಳೆಸುತ್ತಿದ್ದಾರೆ. ಬಿ.ಟಿ ಬದನೆ ಹಾಗೂ ಇತರ ತರಕಾರಿಗಳ ಬಗ್ಗೆ ಚರ್ಚೆಯಾಗುತ್ತಿದೆ. ಸಾವಿರಾರು  ವರ್ಷಗಳಿಂದ ಈ ಎಲ್ಲಾ ತಳಿಗಳನ್ನು ನಾವು ಕಾಪಾಡಿಕೊಂಡು ಬಂದಿದ್ದೇವೆ. ವ್ಯವಸಾಯ ಮಾಡಿದ್ದೇವೆ. ಲಾಭವನ್ನೂ ಪಡೆದಿದ್ದೇವೆ. ಈಗ ಇದ್ದಕ್ಕಿದ್ದ ಹಾಗೆ ಬಹುರಾಷ್ಟ್ರೀಯ ಕಂಪೆನಿಗಳು ಕುಲಾಂತರಿ ಬೀಜ ಕೊಡ್ತೀವಿ ಅಂತಿದ್ದಾರೆ. ಇಚ್ಛೆ ಇದ್ದವರು ಇದನ್ನು ಬೆಳೆಸಿ ಅಂದರೆ ನಮ್ಮದೇನೂ ತಕರಾರಿಲ್ಲ. ಹಾಗೇ ಮನುಷ್ಯನ ಆರೋಗ್ಯದ ಮೇಲೆ ಏನೂ ಪರಿಣಾಮ ಆಗಲ್ಲ ಅಂದರೆ ಒಪ್ಪಿಕೊಳ್ಳಬಹುದು. ಕುಲಾಂತರಿ ಬದನೆ ತನ್ನ ಮೇಲೆ ಕೂರುವ ಕೀಟವನ್ನು ಕೊಲ್ಲುವ ಶಕ್ತಿ ಹೊಂದಿದೆ. ಅದ್ದರಿಂದ ಈ ಬದನೆಗೆ ರೋಗ ಬರಲ್ಲ ಎಂಬುದು ಕೃಷಿ ತಜ್ಞರ ವಾದ. ತನ್ನ ಮೇಲೆ ಕುಳಿತುಕೊಳ್ಳುವ ಕೀಟ ಕೊಲ್ಲುವ ಶಕ್ತಿ ಇರುವ ಬದನೆ ಮನುಷ್ಯನ ಸೂಕ್ಷ್ಮ ನರನಾಡಿಗಳನ್ನು ಕೊಲ್ಲುವುದಿಲ್ಲ ಎಂಬ ಗ್ಯಾರಂಟಿ ಏನು?  ಮಾತ್ರವಲ್ಲ ಒಂದು ದಿನ ಸರಕಾರ ಮತ್ತು ಈ ಕಂಪೆನಿಗಳು ಇದನ್ನೇ ಬೆಳೆಯಿರಿ ಎಂದು ನಮ್ಮ ಮೇಲೆ ಹೇರಲ್ಲ ಎಂಬ ಗ್ಯಾರಂಟಿ ಏನು?

ನಮ್ಮ ಸ್ಥಳಿಯ ತಳಿಗಳಿಂದ ಇಳುವರಿ ಸ್ವಲ್ಪ ಕಡಿಮೆ ಇರಬಹುದು. ಆದರೆ ಇದು ಆರೋಗ್ಯ ಕೆಡಿಸುವುದಿಲ್ಲ. ನಮ್ಮ ಹಿರಿಯರು ಕುಟ್ಟಿದ ಅಕ್ಕಿ, ಮಣ್ಣಿನ ಪಾತ್ರೆ, ಸೌದೆಯ ಬೆಂಕಿಯಲ್ಲಿ ಅಡಿಗೆ, ರುಬ್ಬಿದ ಮಸಾಲೆ ತಿಂದು ಗಟ್ಟಿಮುಟ್ಟಾಗಿದ್ದರು. ಆ ತಿಂಡಿ ತಿನಿಸಿನ ಸ್ವಾದ ಆಹ್ಲಾದಕರವಾಗಿತ್ತು. ಅದೇ ಸ್ಥಿತಿಯಲ್ಲಿ ನಾವಿರಬೇಕೆಂದೆನೂ ಇಲ್ಲ ನಿಜ. ಕುಟ್ಟುವ ಅಕ್ಕಿ ಬದಲು ಮಿಲ್ಲು ಬಂದಿದೆ. ಮಣ್ಣಿನ ಪಾತ್ರೆ ಬದಲು ಸ್ಟೀಲ್ ಪಾತ್ರೆ ಬಂದಿದೆ. ಸೌದೆ ಬದಲು ಗ್ಯಾಸ್ ಸ್ಟೌವ್ ಇದೆ. ರುಬ್ಬುವ ಬದಲು ಮಿಕ್ಸಿ ಬಂದಿದೆ. ಇದೆಲ್ಲವೂ ನಮ್ಮ ಅನುಕೂಲಕ್ಕಾಗಿ, ಕಡಿಮೆ ಶ್ರಮಕ್ಕಾಗಿ ಮತ್ತು ಸಮಯ ಉಳಿತಾಯಕ್ಕಾಗಿ. ವೈಜ್ಞಾನಿಕತೆಯೊಂದಿಗೆ ನಾವು ಹೆಜ್ಜೆ ಹಾಕಲೇ ಬೇಕು. ಆದರೆ ಮಾನವನ, ಪ್ರಾಣಿ, ಪಕ್ಷಿಯ ದೇಹಕ್ಕೆ ವಿಷವುಣಿಸುವ ವೈಜ್ಞಾನಿಕತೆ ಬೇಕೆ? ದೇಶದ ಕೃಷಿ ಕ್ಷೇತ್ರವನ್ನು ಬಹುರಾಷ್ಟ್ರೀಯ ಕಂಪೆನಿಗಳಿಗೆ ಒತ್ತೆಯಿಡಬಲ್ಲ ಬೀಜ, ಗೊಬ್ಬರಗಳು ನಮಗೆ ಬೇಕೇ ಎನ್ನುವುದು ನನ್ನನ್ನು ಕಾಡುತ್ತಿರುವ ಪ್ರಶ್ನೆ. ಹೊಸತರದ ಬೀಜ, ಗೊಬ್ಬರ, ಕ್ರೀಮಿನಾಶಕಗಳು ಹೊಸರೀತಿಯ ಖಾಯಿಲೆ, ರೋಗಗಳನ್ನು ಹೊತ್ತು ತರುತ್ತಿವೆ. ಆಧುನಿಕ ರೀತಿಯಲ್ಲಿ ಬೆಳೆಯುವ ಯಾವುದೇ ಬೆಳೆಗೆ ರಸಗೊಬ್ಬರ ಇಲ್ಲದೇ  ನಡೆಯುವುದಿಲ್ಲ. ಹಾಗೇನೇ ಕ್ರೀಮಿನಾಶಕ ಮೊಗ್ಗು ಬಿಡುವುದರಿಂದ ಹಿಡಿದು ಹಣ್ಣಾಗುವ ತನಕ, ಬೆಳೆ ಕೊಯ್ಯುವ ತನಕ ಸಿಂಪಡಿಸಲೇ ಬೇಕು. ನಾವು ತಿನ್ನುವ ದ್ರಾಕ್ಷಿ, ಕ್ಯಾಬೆಜ್, ಹೂಕೋಸು ಇವನ್ನು ಪ್ರಯೋಗಲಯಕ್ಕೆ ಕೊಟ್ಟು ಪರೀಕ್ಷೆ ಮಾಡಿಸಿದರೆ ಅದನ್ನು ಮನೆಯೊಳಗೆ ತರುವ ದೈರ್ಯವನ್ನು ಯಾವೊಬ್ಬ ಗ್ರಾಹಕನೂ ಮಾಡುವುದಿಲ್ಲ. ಆದರೆ ಹುಟ್ಟಿನಿಂದಲೇ ಕ್ರೀಮಿನಾಶಕ ಸಿಂಪಡಿಸಿ ನಾವೇ ವಿಷ ಹಾಕಿ ಆ ವಿಷವನ್ನು ನಾವು ನಮ್ಮ ಪರಿವಾರವೇ ತಿನ್ನುತ್ತಿದ್ದೇವೆ. ಕೊನೆ ಪಕ್ಷ ರೈತ ತಾನು ತನ್ನ ಮನೆಯವರು ಉಣ್ಣುವುದಕ್ಕಾದರೂ ರಸಗೊಬ್ಬರ, ಕ್ರ್ರಿಮೀನಾಶಕ ರಹಿತ ಬೆಳೆ ಬೆಳೆಯುವುದರ ಬಗ್ಗೆ ಚಿಂತನೆ ಮಾಡಬೇಕು. ನಮ್ಮ ಭೂಮಿ ವಿಷ ಆಗಿದೆ. ಭೂಮಿಯೊಳಗಿರುವ ನೀರನ್ನು ವಿಷ ಮಾಡಿದ್ದೇವೆ. ಇವತ್ತು ಮಂಡ್ಯದಂತಹ ನೀರಾವರಿ ಜಿಲ್ಲೆಗಳಲ್ಲಿ ಬೋರ್‌ವೆಲ್ ಕೊರೆದರೆ, ಬಾವಿ ತೊಡಿದರೆ ವಿಷ ನೀರು (ಪ್ಲೊರೈಡ್) ಸಿಗುತ್ತದೆ. ಸಾವಿರಾರು ಟನ್ ರಸಗೊಬ್ಬರ ಭೂಮಿಗೆ ಸುರಿದು ಕುಡಿಯುವ ಅಮೃತವೇ ವಿಷವಾಗಿದೆ.

ಇಡೀ ದೇಶ ಒಗ್ಗಟ್ಟಾಗಿ ಇಂದು ಚರ್ಚೆಯಾಗುತ್ತಿರುವ ಕುಲಾಂತರಿ ಬೀಜಗಳ ಬಗ್ಗೆ ಯೋಚನೆ ಮಾಡಬೇಕಾಗಿದೆ. ಮುಂದಿನ ದಶಕಗಳಲ್ಲಿ ನಮ್ಮ ಬೀಜಗಳನ್ನು ಕಳೆದುಕೊಂಡು ಬಹುರಾಷ್ಟ್ರೀಯ ಕಂಪೆನಿಗಳು ಕೊಡುವ ಬೀಜವನ್ನೇ ನೆಚ್ಚಿಕೊಂಡಿದ್ದೇವೆ ಅಂದುಕೊಳ್ಳಿ; ಪೋಖ್ರಾನ್ ನಲ್ಲಿ ಅಣುಸ್ಪೋಟ ಆದ ತಕ್ಷಣ ಅಮೇರಿಕ ಸೇರಿದಂತೆ ಬೇರೆ ದೇಶಗಳು ಹೇಗೆ ನಡೆದು ಕೊಂಡವು? ಅಣುಸ್ಪೋಟ ವಿರೋದಿಸಿ ನಮ್ಮ ದೇಶದ ಮೇಲೆ ಆರ್ಥಿಕ ದಿಗ್ಬಂಧನ ಹಾಕಿದವು. ನಮ್ಮ ಮಿಲಿಟರಿಗೆ ಕೊಡಬೇಕಾದ ಸೂಪರ್ ಕಂಪ್ಯೂಟರ್ ಕೊಡುವುದನ್ನು ನಿಲ್ಲಿಸಿದವು. ಮುಂದೊಂದು ದಿನ ಯುದ್ದ ನಡೆಯಿತು ಅಥವಾ ಅವರ ಇಚ್ಛೆಯಂತೆ ನಾವು ನಡೆದುಕೊಳ್ಳಲಿಲ್ಲ ಅಂತ ಇಟ್ಟುಕೊಳ್ಳೋಣ ನಮ್ಮ ರೈತರಿಗೆ ಬೀಜ ಕೊಡುವುದನ್ನು, ರಸ ಗೊಬ್ಬರ ಕೊಡುವುದನ್ನು ನಿಲ್ಲಿಸಿದರೆ ನಮ್ಮ ಆಹಾರದ ಸ್ಥಿತಿ ಏನಾಗಬಹುದು? ಊಹಿಸಿಕೊಂಡರೆ ಭಯವಾಗುತ್ತದೆ. ಎಲ್ಲಾ ದೇಶಗಳು ಅವರವರ ದೇಶವನ್ನು ಎಲ್ಲಾ ರಂಗಗಳಲ್ಲೂ ಸ್ವಾವಲಂಬಿಯನ್ನಾಗಿ ಮಾಡುವ ಯೋಚನೆ, ಯೋಜನೆ ಮಾಡುತ್ತಿರುವಾಗ ನಾವ್ಯಾಕೆ ಹಿಂದೆ ಬಿಳುತ್ತಿದ್ದೇವೆ. ನಾವ್ಯಾಕೆ ಮಾನ್ಸಾಂಟೊ, ಸಿಜಿಂತಾ ದಂತಹ ಕಂಪೆನಿಗಳ ದಾಸರಾಗುತ್ತಿದ್ದೇವೆ. ಒಂದು ಈಸ್ಟ್ ಇಂಡಿಯಾ ಕಂಪೆನಿ ನಮ್ಮನ್ನು 2 ಶತಮಾನಗಳ ಕಾಲ ದಾಸ್ಯತೆಗೆ ದೂಡಿತ್ತು. ವ್ಯಾಪಾರಕ್ಕಾಗಿ ಬಂದವರು ಆಧಿಪತ್ಯ ನಡೆಸಿದರು. ಕೇವಲ 62 ವರ್ಷಗಳ ಸ್ವಾತಂತ್ರ್ಯದ ಅವಧಿಯಲ್ಲಿ ನಮ್ಮ ಹಿರಿಯರು ಸ್ವಾತಂತ್ರ್ಯ ಹೋರಾಟಕ್ಕಾಗಿ ಪಟ್ಟ ಕಷ್ಟ, ನೋವನ್ನು ಯಾಕೆ ಮರೆಯುತ್ತಿದ್ದೇವೆ. ಜಗತ್ತಿನ ಅತ್ಯಂತ ಹೆಚ್ಚು ಬುದ್ಧಿವಂತರಿರುವ, ಯುವಕ, ಯುವತಿಯರಿರುವ ನಾಡು ಇದು. ನಮಗೇನಾಗಿದೆ? ಯಾವ ತಂತ್ರಜ್ಞಾನ ನಮಗೆ ಅಗತ್ಯವಿದೆಯೋ ಅದನ್ನು ತರಿಸಿಕೊಳ್ಳೋಣ. ಜಗತ್ತಿನ ಎಲ್ಲಾ ಗಾಳಿಯು ನಮ್ಮ ದೇಶದ ಮೇಲೆ ಬೀಸಲಿ ಆದರೆ ಆ ಗಾಳಿ ಬಿರುಗಾಳಿಯಾಗಬಾರದು. ನಮ್ಮ ಬುಡವೇ ಕಿತ್ತು ಹೋಗಬಾರದು.

ಶಾಸಕಾಂಗ ಮತ್ತು ಕಾರ್ಯಾಂಗಗಳಿಂದ ಈ ರೀತಿಯ ಬದಲಾವಣೆಗಳನ್ನು ಯೋಚನೆ ಮಾಡುವುದು ಕಷ್ಟವೇನೋ ಎಂದೆಣಿಸಿ ಹಲವಾರು ಸಾರಿ ನಿರಾಶೆಯಾಗುತ್ತದೆ. ಆದರೆ ಭಾರತೀಯ ಸಮಾಜಕ್ಕೆ ಆ ಶಕ್ತಿಯಿದೆ. ದೇಶದ ಹಿತಕ್ಕಾಗಿ, ಸಮಾಜದ ಹಿತಕ್ಕಾಗಿ ಯೋಚನೆ ಮಾಡಬಲ್ಲ, ಹೋರಾಟ ಮಾಡಬಲ್ಲ, ಧೀಮಂತ ಶಕ್ತಿಯನ್ನು ಇನ್ನೂ ಈ ಸಮಾಜ ಉಳಿಸಿಕೊಂಡಿದೆ, ನಾವೆಲ್ಲರೂ ಭಾರತೀಯರು, ನಮ್ಮನ್ನು ನಾವು ಉಳಿಸಿಕೊಳ್ಳುವುದಕ್ಕಾಗಿ, ಆ ಮೂಲಕ ಸಮಾಜ ಮತ್ತು ರಾಷ್ಟ್ರವನ್ನು ಉಳಿಸುವುದಕ್ಕಾಗಿ ನಮ್ಮ ಭೂಮಿ, ನಮ್ಮ ನೀರು, ನಮ್ಮ ಪ್ರಕೃತಿ, ನಮ್ಮ ತಳಿಗಳು, ನಮ್ಮ ವಿಚಾರವನ್ನು ಉಳಿಸಿಕೊಳ್ಳೋಣ. ಪ್ರತಿಯೊಬ್ಬರು ಈ ದಿಕ್ಕಿನಲ್ಲಿ ಯೋಚನೆ ಮಾಡೋಣ.

ಶೋಭಾ

Quotes

No authority can save us, no beliefs. If there is a God, all can find Him. No one needs to be told it is warm; all can discover it for themselves. So it should be with God. He should be a fact in the consciousness of every person

— Swami Vivekananda

Newsletter

Get latest updates of my blog, news, media watch in your email inbox. subscribe to my newsletter