Shobha Karndlaje

Untitled-2

BJP Karnataka

ಸಾರ್ವಜನಿಕರಿಗೆ ಮತ್ತು ಮಾಧ್ಯಮ ಮಿತ್ರರಿಗೆ ನನ್ನದೊಂದು ಕಳಕಳಿಯ ವಿನಂತಿ

ದಿನಾಂಕ 24 .08 .2011 ರಂದು ರಾಜ್ಯದ ಪ್ರಮುಖ ಸುದ್ದಿ ವಾಹಿನಿಯೊಂದು ನನ್ನ ಬಗ್ಗೆ ಸುಳ್ಳು ಸುದ್ದಿಯೊಂದನ್ನು ಪ್ರಸಾರ ಮಾಡಿತೆಂದು ಕೇಳಿ ತಿಳಿದುಕೊಂಡೆ. ಈ ಸುದ್ದಿಯ ಬಗೆಗಿನ ಸತ್ಯಾಸತ್ಯತೆಯನ್ನು ರಾಜ್ಯದ ಇತರ ಮಾಧ್ಯಮಗಳು ತಿಳಿದುಕೊಳ್ಳಬೇಕೆಂಬ ವಿನಂತಿಯನ್ನು ಎಲ್ಲಾ ಮಾಧ್ಯಮ ಮಿತ್ರರಲ್ಲಿ ಮಾಡುತ್ತಿದ್ದೇನೆ. ಇಂತಹ ಪ್ರಕರಣಗಳು ಸಾರ್ವಜನಿಕ ಬದುಕಿನಲ್ಲಿರುವವರ ನನ್ನಂತಹವರ ಮೇಲೆ ಸಂಶಯವನ್ನು ಮೂಡಿಸುತ್ತದೆ.  ಈ ಸುದ್ದಿ ಸತ್ಯವೇ ? ಅಥವಾ ಇದರ ಹಿಂದಿರುವ ಉದ್ದೇಶವೇನು ? ಎಂದು ತಿಳಿದುಕೊಳ್ಳುವ ಹಕ್ಕು ಎಲ್ಲರಿಗೂ ಇದೆ.  ಏಕೆಂದರೆ ನಾನು ಜನತೆಗೆ ಉತ್ತರದಾಯಿ.  ನನ್ನನ್ನು ಶಾಸಕಿಯಾಗಿ ಆಯ್ಕೆ ಮಾಡಿ, ಕ್ಯಾಬಿನೆಟ್ ದರ್ಜೆ ಮಂತ್ರಿಯನ್ನಾಗಿ ಮಾಡಿದ ನನ್ನ ಕ್ಷೇತ್ರದ ಜನರೂ ಸೇರಿದಂತೆ ರಾಜ್ಯದ 6 ಕೋಟಿ ಜನರಿಗೆ ಉತ್ತರ ಕೊಡುವ ಅಗತ್ಯವಿದೆ.  ಅದು ನನ್ನ ಕರ್ತವ್ಯ ಕೂಡ.

ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯುವುದಕ್ಕಾಗಿಯೇ ಇಂತಹ ಸುದ್ದಿಯೊಂದು ಪ್ರಸಾರವಾಗಿದೆಯೆಂದು ಯಾರು ಬೇಕಾದರೂ ಅರ್ಥ ಮಾಡಿಕೊಳ್ಳಬಲ್ಲರು.  ಜನ ಪ್ರತಿನಿಧಿಗಳ ಬಗ್ಗೆ ಮಾದ್ಯಮದಲ್ಲಿ ಸುದ್ದಿ ಬರುವಾಗ ಆ ಮಾಧ್ಯಮಕ್ಕೂ ಜವಾಬ್ದಾರಿ ಇರುತ್ತದೆಯೆಂದು ಜನರ ಹಾಗೂ ನನ್ನ ಭಾವನೆ.  ಆದರೆ ಅಂತಹ ಭಾವನೆಗಳು ನಿಮ್ಮಂತಹ ಕೆಲವು ಟಿ.ವಿ. ಮಾಧ್ಯಮಗಳು ಬಿತ್ತರಿಸುತ್ತಿರುವ ಸುದ್ದಿಯಿಂದಾಗಿ ಸುಳ್ಳಾಗುತ್ತಿವೆ.

ಮಾಧ್ಯಮ ಜಗತ್ತಿನಲ್ಲಿ ಕೆಲವರ ವಿಕೃತ ಸಂತೋಷಕ್ಕೆ ನನ್ನಂತಹವರು ಬಲಿಯಾದರೆ ರಕ್ಷಣೆ ಕೊಡುವವರು ಯಾರು ? ಮಾಧ್ಯಮ ಕ್ಷೇತ್ರವು ಸಾರ್ವಜನಿಕ ಕ್ಷೇತ್ರದಲ್ಲಿ ಹೆಚ್ಚು ಪರಿಣಾಮಕಾರಿ ಎಂಬುದು ನಿಜವಾದರೂ ನಮ್ಮ ದಶಕಗಳ ಶ್ರಮವನ್ನು ಕೆಲವೇ ನಿಮಿಷಗಳಲ್ಲಿ ಪ್ರಶ್ನಾರ್ಥಕ ಚಿಹ್ನೆಗೆ ತಂದು ನಿಲ್ಲಿಸಬಲ್ಲವು.  ಅಂತಹ ಶಕ್ತಿ ಮಾಧ್ಯಮಕ್ಕಿದೆ. ಆದರೆ ಕಳೆದುಹೋದ ವ್ಯಕ್ತಿತ್ವನ್ನು ಪುನರ್ ನಿರ್ಮಾಣ ಮಾಡಲು ಈ ಸಮಾಜ ದಶಕಗಳನ್ನೇ ತೆಗೆದುಕೊಳ್ಳುತ್ತದೆ.  ಈ ನಷ್ಟ ಭರಿಸುವವರು ಯಾರು ?

ಜನಮುಖಿ ಮಾಧ್ಯಮಗಳು, ನನ್ನಂತೆಯೇ ಗ್ರಾಮೀಣ ಪ್ರದೇಶದಿಂದ ಬಂದು ಜನಸೇವೆ ಮಾಡುತ್ತಿರುವ ಹಲವಾರು ಜನರನ್ನು ಗುರುತಿಸಿ ಪ್ರೋತ್ಸಾಹಿಸಿವೆ. ಅಂತೆಯೇ ನನ್ನ ಅನೇಕ ಸಾಮಾಜಿಕ ಚಟುವಟಿಕೆಗಳನ್ನೂ ಸಹ ಗುರುತಿಸಿವೆ.  ಪರಿಸರ ಸ್ನೇಹಿ ಹೋರಾಟಗಳು, ಸುನಾಮಿ ಬಂದಾಗ ನಾಗಪಟ್ಟಣಂನಲ್ಲಿ ನಾನು ಮಾಡಿದ ಕಾರ್ಯ, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಬದಲಾವಣೆ ತರಲು ಮಾಡಿದ ಅವಿರತ ಪ್ರಯತ್ನ ನಂತರ ಅಧಿಕಾರದಿಂದ ವಂಚಿತಳಾದರೂ ನಾನು ಮಾಡಿದ ನಕ್ಸಲಿಸಂ ಬಗೆಗಿನ ಹೋರಾಟ ಮತ್ತು ಆ ಪ್ರದೇಶಗಳ ಭೇಟಿ, ನೆರೆ ಹಾವಳಿ ಪ್ರದೇಶಗಳಲ್ಲಿ ನನ್ನ ಕಾರ್ಯ, ಎಂಡೋಸಲ್ಫಾನ್ ಪೀಡಿತರಿಗಾಗಿ ಮಾಡಿದ ಹೋರಾಟ, ಮಂಗಳಮುಖಿಯರ (ತೃತೀಯ ಲಿಂಗಿಗಳು) ಬಗ್ಗೆ ಸರ್ಕಾರದ ಗಮನ ಸೆಳೆದಿದ್ದು ಇತ್ಯಾದಿ ಸಮಾಜಮುಖಿ ಕೆಲಸಗಳನ್ನು ಈ ರಾಜ್ಯದ ಜನ ಮತ್ತು ಮಾಧ್ಯಮಗಳು ಪ್ರೋತ್ಸಾಹಿಸಿವೆ.  ಈ ಪ್ರೋತ್ಸಾಹವೇ ನನಗೆ ಹೆಚ್ಚು ಕೆಲಸ ಮಾಡಲು ಶಕ್ತಿ ಹಾಗೂ ಪ್ರೇರಣೆಯನ್ನು ಕೊಟ್ಟಿದೆ.  ಈಗಲೂ ಅತ್ಯಂತ ಕಠಿಣ ಸಮಸ್ಯೆಗಳಿರುವ ಎರಡು ಇಲಾಖೆಗಳಲ್ಲಿ ನನ್ನ ಶಕ್ತಿ ಮೀರಿ ಸುಧಾರಣೆಗೆ ಒತ್ತು ನೀಡುತ್ತಿದ್ದೇನೆ

ಇಂತಹ ಸಂದರ್ಭದಲ್ಲಿ ಕಳೆದ ವಾರದಲ್ಲಿ ಒಂದು ದಿನ ಪತ್ರಿಕೆ ಮತ್ತು ನಿನ್ನೆ ಸುದ್ದಿ ವಾಹಿನಿಯೊಂದರಲ್ಲಿ ಬಂದ ಸುದ್ದಿಯಿಂದ ಮನಸ್ಸಿಗೆ ತುಂಬಾ ನೋವಾಗಿದೆ.  ರಾಜಕಾರಣಿಗಳೆಂದರೆ ಅಸಹ್ಯ ಪಡುವ ಈ ಕಾಲಘಟ್ಟದಲ್ಲಿ ಪ್ರಾಮಾಣಿಕವಾಗಿ ಶ್ರದ್ದೆಯಿಂದ ಕೆಲಸ ಮಾಡುವ ನನ್ನ ಬಗ್ಗೆ ಹಗುರವಾಗಿ, ಅವಹೇಳನಕಾರಿಯಾಗಿ ಸಂಶಯ ಮೂಡುವ ರೀತಿಯಲ್ಲಿ ಬಿಂಬಿಸುವುದು ಎಷ್ಟು ಸರಿ ಎಂಬುದು ನನ್ನ ಪ್ರಶ್ನೆ.  ಇದನ್ನು ಮಾಧ್ಯಮಗಳ ಹಿರಿಯರಾದ ನೀವು ಒಪ್ಪಿಕೊಳ್ಳುತ್ತೀರಾ ?  ಹಲವು ವರ್ಷಗಳಿಂದ ಚುನಾಯಿತ ಪ್ರತಿನಿಧಿಯಾದ ನಾನು ರಾಜ್ಯ ಯಾವುದೇ ಜನರಿಂದ, ಅಧಿಕಾರಿಗಳಿಂದ, ಉದ್ಯಮಿಗಳಿಂದ ಲಂಚ ಪಡೆದಿದ್ದೇನೆಂದು ಯಾರಾದರೂ ಸಾಬೀತು ಮಾಡಿದರೆ ನಾನು ಸಾರ್ವಜನಿಕ ಬದುಕಿನಿಂದ ದೂರವಾಗಲು ತಯಾರಿದ್ದೇನೆ.

ನಾನು ವಿದೇಶದಲ್ಲಿ ಹಣ ತೊಡಗಿಸಿದ್ದೇನೆಂಬ ಎಂತಹ ಅಪ್ಪಟ ಸುಳ್ಳನ್ನು ಬಿತ್ತರಿಸಿದ್ದೀರಿ.  ಒಂದು ಸುಳ್ಳನ್ನು ನೂರು ಬಾರಿ ಹೇಳಿ ಜನರ ಮನಸ್ಸಿನಲ್ಲಿ ಸತ್ಯ ಮಾಡಬಹುದೆಂಬುದು ನಿಮ್ಮ ಹುನ್ನಾರವಿರಬಹುದು. ಅತ್ಯಂತ ಪಾರದರ್ಶಕವಾಗಿ ನನ್ನ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೇನೆ.  ಗ್ರಾಮೀಣಾಭಿವೃದ್ಧಿ ಇಲಾಖೆ, ಈಗಿರುವ ಇಂಧನ ಮತ್ತು ಆಹಾರ ಇಲಾಖೆಯ ಅಧಿಕಾರಿಗಳನ್ನು ಯಾರಾದರೂ ವಿಚಾರಿಸಲಿ.  ನಾನು ಎಂದಾದರೂ ಎಂಜಲು ಕಾಸಿಗೆ ಕೈಯೊಡ್ಡಿದ್ದೇನೆಯೇ ಕೇಳಿ ನೋಡಿ.  ಹೀಗಿರುವಾಗ ನಾನು ವಿದೇಶದಲ್ಲಿ ಹಣ ಇಟ್ಟಿದ್ದೇನೆಂದು ಹೇಗೆ ಹೇಳಿದ್ದೀರಿ ?

ನಿಮಗೆ ನನ್ನ ಸವಾಲಿದೆ. ನಾನು ವಿದೇಶದಲ್ಲಿ ಹಣ ಇಟ್ಟಿದ್ದನ್ನು ನೀವು ಸಾಬೀತು ಮಾಡಬೇಕು.  ಕೇಂದ್ರ ಸರ್ಕಾರದಿಂದ ಈ ಮಾಹಿತಿ ತರಿಸಿಕೊಳ್ಳಬೇಕು.  ಈ ಆರೋಪ ಸಾಬೀತಾದರೆ ಯಾವ ಶಿಕ್ಷೆಗೂ ನಾನು ಸಿದ್ದಳಿದ್ದೇನೆ.  ಇದು ನನ್ನನ್ನು ಆರಿಸಿರುವ ಜನತೆಯಲ್ಲಿ ಮಾಡುವ ಕಳಕಳಿಯ ಮನವಿ.

(ಶೋಭಾ ಕರಂದ್ಲಾಜೆ)

Quotes

Once you start a working on something,
Dont be afraid of failure and
Dont abandon it.
People who work sincerely are the happiest.

— Chanakya

Newsletter

Get latest updates of my blog, news, media watch in your email inbox. subscribe to my newsletter