Shobha Karndlaje

Untitled-2

BJP Karnataka

ವಿಕೇಂದ್ರಿಕರಣ – ಜನರಿಂದ ಜನರಿಗಾಗಿ

ವಿಕೇಂದ್ರಿಕರಣ ಪ್ರಜಾಪ್ರಭುತ್ವದ ಒಂದು ಸುಂದರ ಪರಿಕಲ್ಪನೆ. ಆಯಾ ಊರಿನ ಅಭಿವೃದ್ದಿಗಾಗಿ ಜನರ ಕೈಗೆ ಹಣ, ಅದರ ಉಪಯೋಗದ ಅಧಿಕಾರ ಕೊಡುವ ಅಧ್ಬುತ ವ್ಯವಸ್ಥೆ. ನಮ್ಮ ಊರಿಗೆ ಏನು ಬೇಕು, ಆಧ್ಯತೆ ಯಾವುದು ಮತ್ತು ಯಾರಿಗೆ ಅನ್ನುವುದನ್ನು ಆ ಊರಿನ ಜನರೇ ನಿರ್ಧರಿಸಬಹುದಾದ, ನಿಜವಾದ ಅರ್ಥದಲ್ಲಿ ‘ಪ್ರಜಾಪ್ರಭುತ್ವ’ದ ಸುಂದರ ಕಲ್ಪನೆ. ಮಹಾತ್ಮ ಗಾಂಧೀಜಿರವರ ಕನಸು ಇದೇ ಆಗಿತ್ತು. ಗ್ರಾಮದಲ್ಲಿ ಜನರ ಕೈಗೆ ಅಧಿಕಾರ ಕೊಡಬೇಕು. ಆ ಗ್ರಾಮ ಸ್ವಾವಲಂಬಿಯಾಗಬೇಕು. ವಿದ್ಯಾವಂತ ಯುವಕ ಊರಲ್ಲೇ ನೆಲೆನಿಂತು ಆ ಊರಿನ ಅಭಿವೃದ್ದಿಯಲ್ಲಿ ಸಕ್ರಿಯ ಪಾತ್ರ ವಹಿಸಬೇಕು ಎಂಬುದನ್ನು ಪ್ರತಿಪಾದನೆ ಮಾಡುತ್ತಲೇ ಇದ್ದರು ಸ್ವಾತಂತ್ರ್ಯ ಬಂದು ನಾಲ್ಕು ದಶಕಗಳ ನಂತರ ಈ ಯೋಜನೆಗೆ ಒಂದು ರೂಪ ಸಿಕ್ಕಿತ್ತು. ಜಿಲ್ಲಾ ಪಂಚಾಯತ್, ಮಂಡಲ ಪಂಚಾಯತ್‌ಗಳೆಂಬ ೨ ಹಂತದ ಆಡಳಿತಕ್ಕೆ ನಮ್ಮ ಕರ್ನಾಟಕ ಅಡಿಪಾಯ ಹಾಕಿ ದೇಶಕ್ಕೆ ಮಾದರಿಯಾಯಿತು. ಅಲ್ಲಿಂದ ಇಲ್ಲಿಯ ತನಕ ತಪ್ಪು, ಒಪ್ಪುಗಳನ್ನು ಸರಿ ಮಾಡಿಕೊಳ್ಳುತ್ತಾ, ಎಡವುತ್ತಾ, ಏಳುತ್ತಾ ಬಂದಿದ್ದೇವೆ. ಇನ್ನೂ ಇದು ಪೂರ್ಣವಾಗಿ ಸರಿಹೋಗಿದೆ ಎಂದೆನ್ನಿಸುತ್ತಿಲ್ಲ. ಹೀಗಿರುವ ೩ ಟೈರ್ (ಮೂರು ಹಂತದ) ಆಡಳಿತದಲ್ಲಿ ಗ್ರಾಮ ಪಂಚಾಯತ್, ತಾಲ್ಲೂಕು ಪಂಚಾಯತ್, ಜಿಲ್ಲಾ ಪಂಚಾಯತ್‌ಗಳಲ್ಲಿ ತಾಲ್ಲೂಕು ಪಂಚಾಯತ್ ಕೇವಲ ಪೊಸ್ಟ ಮ್ಯಾನ್ ಕೆಲಸಕ್ಕೆ ಸೀಮಿತವಾಗಿದೆ. ಹಣ ಮತ್ತು ಅಧಿಕಾರ ಎರಡೂ ಇಲ್ಲದೆ ನರಳುತ್ತಿದೆ. ಹೀಗಾಗಿ ಒಟ್ಟಾರೆಯಾಗಿ ಈ ಮೂರು ಹಂತಗಳ ಆಡಳಿತದ ವ್ಯವಸ್ಥೆಯಲ್ಲಿ ಇನ್ನು ಸುಧಾರಿಸಬೇಕಾದದ್ದು ಬಹಳಷ್ಟಿದೆ.

ಮಹಾತ್ಮಗಾಂಧಿಜಿಯ ಮತ್ತು ನಮ್ಮ ಹಿರಿಯರ ಕಲ್ಪನೆ ಸುಂದರವಾದದ್ದೆ. ಆದರೆ ಜನರ ಕೈಗೆ ಅಧಿಕಾರ ಕೊಟ್ಟಾಗ ಪ್ರಾಮಾಣಿಕವಾಗಿ ಆ ಊರಿನ ಅಭಿವೃದ್ದಿಯ ಯೋಚನೆ, ಯೋಜನೆ ನಡೆಯುತ್ತಿದೆಯೇ? ಇದು ಮಿಲಿಯನ್ ಡಾಲರ್ ಪ್ರಶ್ನೆ. ಆದರೂ ಸತ್ಯವನ್ನು ಒಪ್ಪಿಕೊಳ್ಳಲೇ ಬೇಕು. ಮನಸ್ಸಿಗೆ ನೋವಾದರೂ ನಮ್ಮನ್ನು ನಾವು ಸರಿ ಮಾಡಿಕೊಳ್ಳಲು ಇದು ಅನಿವಾರ್‍ಯ.

ಕಳೆದ ೩ ದಶಕಗಳಲ್ಲಿ ಪಂಚಾಯತ್‌ರಾಜ್ ವ್ಯವಸ್ಥೆಗೆ ಗ್ರಾಮೀಣ ಪ್ರದೇಶದ ರಸ್ತೆ, ಒಳಚರಂಡಿ, ಕುಡಿಯುವ ನೀರು, ಮನೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ವ್ಯಯಿಸಿದ ಹಣ ಸಾವಿರಾರು ಕೋಟಿ ರೂಪಾಯಿಗಳು. ಇದನ್ನೆಲ್ಲಾ ಕೂಡಿಸಿದರೆ ಎಂದೋ ನಮ್ಮ ಹಳ್ಳಿಗಳು ನಂದನವನ ಆಗಬೇಕಿತ್ತು. ಗ್ರಾಮ ರಾಜ್ಯ ರಾಮ ರಾಜ್ಯ ಆಗಬೇಕಿತ್ತು. ಆದರೆ ಇಂದಿನ ನಮ್ಮ ಹಳ್ಳಿಗಳ ಪರಿಸ್ಥಿತಿ ಹಾಗೇ ಇದೆ. ಸುಮಾರು ೧.೫ ಲಕ್ಷ ಕಿಲೋ ಮೀಟರ್ ರಸ್ತೆಗಳ ಪೈಕಿ ಕೇವಲ ೩೭ ಸಾವಿರ ರಸ್ತೆ ಡಾಂಬರೀಕರಣ ಆಗಿದೆ. ಆದರಲ್ಲೂ ಬಹಳಷ್ಟು ರಸ್ತೆ ಕಳಪೆಯಾಗಿದೆ. ಸುಮಾರು ೧೪,೦೦೦ ಹಳ್ಳಿಗಳಲ್ಲಿ ಜನರು ಇನ್ನೂ ಕಲುಷಿತ ನೀರು ಕುಡಿಯುತ್ತಿದ್ದಾರೆ. ದೊಡ್ಡ ಪ್ರಮಾಣದ ಹಳ್ಳಿಗಳಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲವೇ ಇಲ್ಲ. ನಮ್ಮ ಜನರು ಅದರಲ್ಲೂ ಮುಖ್ಯವಾಗಿ ಮಹಿಳೆಯರಿಗೆ ಬೇಕಾಗಿರುವ ಶೌಚಾಲಯ ೬೦ ವರ್ಷಗಳ ಸ್ವಾತಂತ್ರದ ನಂತರವೂ ಶೋಚನೀಯ ಸ್ಥಿತಿಯಲ್ಲಿದೆ. ಇದರಲ್ಲಿ ಮಹಿಳೆಯರ ಬದುಕಿಗೆ ಇನ್ನೂ ಸ್ವಾತಂತ್ಯ್ರ ಸಿಕ್ಕಿಲ್ಲ. ತಲೆಯ ಮೇಲೊಂದು ಸೂರನ್ನು ಕಟ್ಟಲು ೬೦ ವರ್ಷ ಬೇಕೇ ಎಂಬ ಪ್ರಶ್ನೆ ಕಾಡುತ್ತಿದೆ. ಇನ್ನು ಮನೆ ಇಲ್ಲದವರು, ನಿವೇಶನ ಇಲ್ಲದವರು, ಗುಡಿಸಲಲ್ಲಿ ವಾಸ ಮಾಡುವವರ ಅರ್ಜಿಗಳು ಕಛೇರಿಗಳಲ್ಲಿ ಭದ್ರವಾಗಿದೆ ಮತ್ತು ಜನಸಂಖ್ಯೆ ಬೆಳವಣಿಗೆ ಕಾರಣಕ್ಕೆ ಈ ಪಟ್ಟಿ ಬೆಳೆಯುತ್ತಲೇ ಇದೆ. ಹಾಗಾದರೆ ಗ್ರಾಮಗಳಿಗೆ, ತಾಲ್ಲೂಕುಗಳಿಗೆ, ಜಿಲ್ಲೆಗಳಿಗೆ ರಸ್ತೆ, ನೀರು, ಮನೆ ಕೊಟ್ಟಿಲ್ಲವೇ? ಕೊಟ್ಟಿದ್ದೇವೆ. ಸಾವಿರಾರು ಕೋಟಿ ಕೊಟ್ಟಿದ್ದೇವೆ. ಹಾಗಾದರೆ ಅದೆಲ್ಲಾ ಎಲ್ಲಿ ಹೋಗಿದೆ?

ವಿಕೇಂದ್ರಿಕರಣ ವ್ಯವಸ್ಥೆಯ ಜೋತೆಗೆ ಅಭಿವೃದ್ದಿಗೆ ಕೊಟ್ಟ ಹಣದ ವಿಕೇಂದ್ರಿಕರಣವೂ ನಡೆದು ಹೋಯಿತು. ಒಂದು ಗ್ರಾಮ ಪಂಚಾಯತ್‌ಗೆ ೫ ಲಕ್ಷ ಬಂದರೆ ೨೦ ಸದಸ್ಯರಿದ್ದರೆ ೨೫ ಸಾವಿರವನ್ನು ಹಂಚಿಕೆ ಮಾಡಿಕೊಳ್ಳುತ್ತಿದ್ದೇವೆ. ಯಾವುದೇ ವಾರ್ಡ್‌ಲ್ಲಿ ೨೫ ಸಾವಿರ ರೂಪಾಯಿಗೆ ಯಾವ ಕೆಲಸ ಆಗಲು ಸಾಧ್ಯ? ನೀವೇ ಕಲ್ಪಿಸಿಕೊಳ್ಳಬಹುದು. ಅದೇ ೫ ಲಕ್ಷವನ್ನು ಒಂದು ವಾರ್ಡಿನ ಶಾಶ್ವತವಾದ ಕೆಲಸಕ್ಕೆ ಬಳಕೆ ಮಾಡಿದ್ದರೆ ಎಂದೋ ನಮ್ಮ ರಾಜ್ಯದ ಗ್ರಾಮಗಳು ಅಭಿವೃದ್ದಿಯಾಗುತ್ತಿದ್ದವು. ಇದೇ ವಿಕೇಂದ್ರಿಕರಣ ತಾಲ್ಲೂಕು ಪಂಚಾಯತ್, ಜಿಲ್ಲಾ ಪಂಚಾಯತ್‌ಗಳಲ್ಲೂ ಆಯಿತು. ನನಗೆ ಗ್ರಾಮೀಣಾಭಿವೃದ್ದಿ ಸಚಿವೆಯಾಗುವ ಅವಕಾಶ ಸಿಕ್ಕಾಗ ಈ ರೀತಿಯ ತುಂಡು ಗುತ್ತಿಗೆಯನ್ನು ರದ್ದು ಪಡಿಸಿ ಟೆಂಡರ್ ಕರೆದು ಕಾಮಗಾರಿ ಮಾಡುವ ಪ್ರಕ್ರಿಯೆಗೆ ಆರಂಭ ಮಾಡಿದೆ. ಇದನ್ನು ಹಲವಾರು ಜಿಲ್ಲಾ ಪಂಚಾಯತ್‌ಗಳು ವಿರೋಧಿಸಿದವು. ನನ್ನ ಮೇಲೆ ಇಂದಿಗೂ ಹಲವಾರು ಟೀಕೆಗಳು ಬರುತ್ತಿವೆ. ಆದರೆ ವ್ಯವಸ್ಥೆ ಸುಧಾರಣೆಯನ್ನು ಯಾರಾದರೂ ಮಾಡಲೇ ಬೇಕು. ಇಂದೊಂದು ಆರಂಭ ಆಗಿತ್ತು ಅಷ್ಟೆ. ಒಟ್ಟಾರೆಯಾಗಿ ಚುನಾಯಿತ ಪ್ರತಿನಿಧಿಗಳೇ ಇದಕ್ಕೆ ಮನಸ್ಸು ಮಾಡಬೇಕು. ಹಲವಾರು ಪಂಚಾಯತ್‌ಗಳು ಒಳ್ಳೆಯ ಕೆಲಸವನ್ನು ಮಾಡಿದೆ. ತನ್ನ ಪಂಚಾಯತ್‌ಗೆ ಬಂದ ಒಂದೊಂದು ರೂಪಾಯಿಯನ್ನು ಸುದುಪಯೋಗ ಮಾಡಿಕೊಂಡಿವೆ. ಅಂತಹ ಪಂಚಾಯತ್‌ಗಳು ಅಭಿವೃದ್ದಿ ಪಥದಲ್ಲಿವೆ. ಅಲ್ಲಿ ಆಡಳಿತ ನಡೆಸುತ್ತಿರುವವರ ಮಾನಸಿಕತೆಯನ್ನು ಇದು ಅವಲಂಬಿಸಿದೆ. ನನ್ನ ಆಡಳಿತಾವಧಿಯಲ್ಲಿ ಶಾಶ್ವತವಾದ, ಜನರು ನೆನಪಿಡಬಹುದಾದ ಕೆಲಸಗಳಾಗಬೇಕೆಂದು ಚುನಾಯಿತ ಪ್ರತಿನಿಧಿಗಳಾದವರು ನಿರ್ಧಾರ ಮಾಡಿದಾಗ ಮಾತ್ರ ಇದು ಸಾಧ್ಯ.

ಇಂದು ಹಲವಾರು ಗ್ರಾಮ ಪಂಚಾಯತ್, ತಾಲ್ಲೂಕು ಪಂಚಾಯತ್‌ಗಳು, ಜಿಲ್ಲಾ ಪಂಚಾಯತ್‌ಗಳು ಕುಸ್ತಿಯ ಅಖಡಾಗಳಾಗಿವೆ. ಜಾತಿ ರಾಜಕರಣದ ಆಧಾರ ಸ್ತಂಭಗಳಾಗಿವೆ. ದೆಹಲಿ, ಬೆಂಗಳೂರಿನಲ್ಲಿದ್ದ ರಿಸಾರ್ಟ್ ರಾಜಕಾರಣ ಗ್ರಾಮ ಪಂಚಾಯತ್‌ಗೂ ಕಾಲಿಟ್ಟಿದೆ. ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಬಂದಾಗ ಕಿಡ್ನಾಪ್, ಕೊಲೆ ಪ್ರಕರಣಗಳು ನಡೆದಿವೆ. ಸದಸ್ಯರನ್ನು ಹೋಟೆಲ್, ದೇವಸ್ಥಾನಗಳಿಗೆ ಸುತ್ತಿಸಿ ಚುನಾವಣೆ ದಿನ ಕರೆತಂದು ಬಲವಂತವಾಗಿ ಮತ ಹಾಕಿಸುವ ಪ್ರಕ್ರಿಯೆಗಳು ಜಾಸ್ತಿಯಾಗುತ್ತಿವೆ. ನಿಜವಾದ ಅರ್ಥದಲ್ಲಿ ಹಲವಾರು ಒಳ್ಳೆಯ ಅಂಶಗಳ ವಿಕೇಂದ್ರಿಕರಣದ ಜೋತೆಗೆ ಭ್ರಷ್ಟಾಚಾರ, ಜಾತಿ, ಗೂಂಡಾಗಿರಿ, ಸ್ವಜನ ಪಕ್ಷಪಾತದ ವಿಕೇಂದ್ರಿಕರಣವು ಆಗುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ.

ವಿಕೇಂದ್ರಿಕರಣದಲ್ಲಿ ಮಿಸಲಾತಿ ಒಂದು ಅಧ್ಬುತ ವ್ಯವಸ್ಥೆ. ಮಿಸಲಾತಿ ನಿಜವಾದ ಅರ್ಥದಲ್ಲಿ ಎಲ್ಲಾ ಜಾತಿ ವರ್ಗಗಳ ಕೈಗೆ ಅಧಿಕಾರ ನೀಡಿದೆ. ಭಾರತದಂತಹ ಜಾತಿ ವ್ಯವಸ್ಥೆಯೇ ಪ್ರಮುಖವಾಗಿರುವ ದೇಶದಲ್ಲಿ ಮಿಸಲಾತಿ ಇಲ್ಲದೇ ಹೋಗಿದ್ದರೆ ಅಧಿಕಾರದ ಎಲ್ಲಾ ವ್ಯವಸ್ಥೆಯು ಉಳ್ಳವರ ಪಾಲಾಗುತ್ತಿದ್ದವು. ಹಳೆಯ ಊರಿನ ಯಜಮಾನಿಕೆಯ ದಬ್ಬಾಳಿಕೆ ಇಲ್ಲೂ ಮುಂದುವರಿಯುತ್ತಿತ್ತು. ಹಳ್ಳಿಯ ಒಬ್ಬ ಸಾಮಾನ್ಯ ಪರಿಶಿಷ್ಟ ಜಾತಿಯ ಕೂಲಿಯಾಳು, ಮನೆಯಲ್ಲಿ ಘೋಷ ಪದ್ದತಿಯಲ್ಲಿರುವ ತಾಯಿ ಗ್ರಾಮ ಪಂಚಾಯತಿಯ ಅಧ್ಯಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಬಹುದೆಂಬ ಕಲ್ಪನೆ ಮಾಡಲು ಸಾಧ್ಯವಿಲ್ಲ. ಆದರೆ ವಿಕೇಂದ್ರಿಕರಣದಲ್ಲಿ ಮಿಸಲಾತಿ ವ್ಯವಸ್ಥೆ ಎಲ್ಲಾ ಜನ, ಜಾತಿಯ ಕೈಗೆ ಅಧಿಕಾರ ಕೊಟ್ಟಿದೆ. ಯಾರಿಗೆ ಊರಿನ ಬಗ್ಗೆ ಆಸಕ್ತಿಯಿದೆ, ಶಕ್ತಿಯಿದೆ, ಅವರಿಗೆ ಹಣ, ಅಧಿಕಾರ ಎರಡೂ ಕೊಡಲಾಗಿದೆ. ನಿರ್ಧಾರ ಮಾತ್ರ ಅವರದ್ದೆ. ಊರನ್ನು ಬೆಳೆಸಬೇಕಾ? ಬೀಳಿಸಬೇಕಾ? ಇದನ್ನು ಊರಿನ ಜನರೇ ತಿರ್ಮಾನಿಸಬೇಕು. ಒಳ್ಳೆಯವರಲ್ಲಿ ಒಳ್ಳೆಯವರನ್ನು, ಸಜ್ಜನರನ್ನು, ವಿಧ್ಯಾವಂತರನ್ನು, ಹೊಸದಾಗಿ ಯೋಚಿಸುವ ಯುವಕರನ್ನು ಅಧಿಕಾರಕ್ಕೆ ತಂದಾಗ ಮಾತ್ರ ಈ ವ್ಯವಸ್ಥೆಯಲ್ಲಿ ಬದಲಾವಣೆ ಸಾಧ್ಯ. ಸರ್ಕಾರದಿಂದ ಬರುವ ಒಂದೊಂದು ಪೈಸೆಯನ್ನು ಸದುಪಯೋಗ ಮಾಡುತ್ತೇವೆ ಎಂಬ ಪ್ರತಿಜ್ಞೆಯೊಂದಿಗೆ ಚುನಾಯಿತ ಪ್ರತಿನಿಧಿ ಪಂಚಾಯತ್ ಮೆಟ್ಟಿಲೇರಿದಾದ ರಾಜ್ಯದಲ್ಲಿ, ದೇಶದಲ್ಲಿ ಬದಲಾವಣೆ ಸಾಧ್ಯ. ಸದ್ಯದ ಸ್ಥಿತಿ ನಿರಾಶದಾಯಕವಾಗಿದೆ. ಆದರೆ ನಾವು ಭಾರತೀಯರು ಮನಸ್ಸು ಮಾಡಿದರೆ ಎಲ್ಲಾವನ್ನು ಗೆಲ್ಲಬಲ್ಲ ಶಕ್ತಿ, ಸಾಮಥ್ಯ ನಮಗಿದೆ. ಆ ದೃಢ ಸಂಕಲ್ಪವನ್ನು ಹಿಂದಿನವರು ಮಾಡಿದಾಗ ಹಲವಾರು ಕ್ರಾಂತಿಕಾರಿ ಬದಲಾವಣೆಗಳು, ಬೆಳವಣಿಗೆಗಳು ದೇಶದಲ್ಲಿ, ರಾಜ್ಯದಲ್ಲಿ ನಡೆದಿದೆ. ಅದೇ ಸಂಕಲ್ಪದೊಂದಿಗೆ ನಾವೂ, ಹೊಸ ಪೀಳಿಗೆ ಮುನ್ನುಗ್ಗಬೇಕಿದೆ.

ನಾವು ವ್ಯವಸ್ಥೆಯನ್ನು ಬದಲಾವಣೆ ಮಾಡೇ ಮಾಡುತ್ತೇವೆ ಎಂಬ ಪ್ರತಿಜ್ಞೆಯನ್ನು ಈಗಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಪ್ರತಿಯೊಬ್ಬ ಅಭ್ಯಥಿಯೂ ಮಾಡುವ ಅವಶ್ಯಕತೆ ನಾಡಿಗಿದೆ. ಆಗ ಮಹಾತ್ಮ ಗಾಂಧೀಜಿ, ಪಂಡಿತ್ ದೀನದಯಾಳ್ ಉಪಾಧ್ಯಾಯರು ಕಂಡ ರಾಮರಾಜ್ಯದ ಕಲ್ಪನೆ, ಕಟ್ಟಕಡೆಯ ವ್ಯಕ್ತಿಯ ಕಣ್ಣಿರನ್ನು ಒರಸುವ ಕಲ್ಪನೆಗೆ ಅರ್ಥ ಬಂದೀತು.

ಸುಧಾರಣೆಗೆ ಕೆಲವು ಪ್ರಮುಖ ಅಂಶಗಳು:

  1. ಪಕ್ಷ ರಾಜಕಾರಣ ಗ್ರಾಮ ಪಂಚಾಯತ್, ತಾಲ್ಲೂಕು ಪಂಚಾಯತ್, ಜಿಲ್ಲಾ ಪಂಚಾಯತ್‌ಗಳಲ್ಲಿ ನಿಲ್ಲಬೇಕು. ಇಲ್ಲೂ ಪಕ್ಷದ ಚಿಹ್ನೆಯ ಮೇಲೆ ಸ್ಪರ್ಧಿಸುವುದು ರದ್ದಾಗಬೇಕು. ಪಕ್ಷದ ಹೊರತಾಗಿ ಅರ್ಹರನ್ನು ಆಯ್ಕೆಮಾಡಲು ಜನರಿಗೆ ಅವಕಾಶಸಿಗಬೇಕು. ಅಧ್ಯಕ್ಷರನ್ನು ಜನರೇ ನೇರವಾಗಿ ಆಯ್ಕೆ ಮಾಡುವಂತಾಗಬೇಕು.
  2. ಚುನಾವಣಾ ಪ್ರಚಾರವನ್ನು ಪಕ್ಷಗಳು ಮಾಡುವ ಬದಲಾಗಿ ಸರ್ಕಾರ ಅಥವಾ ಚುನಾವಣಾ ಆಯೋಗವೇ ಮಾಡುವಂತಾಗಬೇಕು. ಅಭ್ಯರ್ಥಿಗಳು, ಅವರ ಹಿನ್ನೆಲೆ ಬಗ್ಗೆ ಜನರಿಗೆ ಜಾಹಿರಾತುಗಳ ಮೂಲಕ ಮಾಹಿತಿ ಸಿಗಬೇಕು,
  3. ಅಭಿವೃದ್ದಿಗೆ ಬಂದ ಹಣವನ್ನು ಶಾಶ್ವತವಾದ ಕೆಲಸಗಳನ್ನು ಮಾಡಲು ಮಿಸಲಿಡಬೇಕು. ಊರಿನ ಶಾಲೆ, ಆಸ್ಪತ್ರೆ, ಪಶುಆಸ್ಪತ್ರೆ, ರಸ್ತೆ, ಒಳಚರಂಡಿ, ಶೌಚಾಲಯ, ಕುಡಿಯುವ ನೀರಿಗೆ ಆಧ್ಯತೆ ಕೊಡುವ ಶಾಶ್ವತ ಕೆಲಸಗಳಾಗಬೇಕು. ಇದೇ ಆಧ್ಯತೆ ಪಟ್ಟಿಯಲ್ಲಿರುವಂತೆ ಮಾಡಬೇಕು. ಹಣವನ್ನು ಹಂಚಿಕೊಳ್ಳುವ ಪದ್ದತಿಯನ್ನು ನಿಲ್ಲಿಸಬೇಕು.
  4. ಗ್ರಾಮ ಸಭೆಗಳಿಗೆ ಆಧ್ಯತೆ ಸಿಗಬೇಕು. ಇವು ಕಾಟಾಚಾರದ ಸಭೆಗಳಾಗದೆ ನಿಜವಾದ ಅರ್ಥದಲ್ಲಿ ಆ ಊರಿನ ಕಾಮಗಾರಿಗಳ ಆಧ್ಯತೆಯನ್ನು ಅವರೇ ನಿರ್ಧಾರ ಮಾಡುವಂತಾಗಬೇಕು. ನಾಕಬಂದಿ ಖಡ್ಡಾಯವಾಗಬೇಕು.
  5. ಪಂಚಾಯತ್ ಕಾರ್ಯಕಲಾಪ ನಡೆಸಲು ನೀತಿ, ನಿಯಮಗಳು ನಿರ್ಧಾರವಾಗಬೇಕು. ಕಾರ್ಯಕಲಾಪಗಳನ್ನು ಕಡ್ಡಾಯವಾಗಿ ವಿಡಿಯೋ ಚಿತ್ರಿಕರಣ ಮಾಡಬೇಕು.
  6. ಪಂಚಾಯತ್ ವ್ಯವಸ್ಥೆಯಲ್ಲಿ ಅಧಿಕಾರಿಗಳ ಹಸ್ತಕ್ಷೇಪವನ್ನು ಕಡಿಮೆ ಮಾಡಲು ನೀತಿ ರೂಪಿಸಬೇಕು.
  7. ಪಂಚಾಯತ್‌ಗಳಿಗೆ ಬಂದ ಹಣ, ಖರ್ಚಾದ ಬಗೆ, ಇವುಗಳ ಬಗ್ಗೆ ಮಾಹಿತಿ ಪಡೆಯಲು ಜಿಲ್ಲಾ ಮಟ್ಟದಲ್ಲಿ ರಾಜಕೀಯ ಪಕ್ಷ ಹೊರತುಪಡಿಸಿದ ಗಣ್ಯರ ತಂಡವನ್ನು ರಚಿಸಿ ಅವರು ಪರಿಶೀಲಿಸಲು ಅವಕಾಶ ನೀಡಬೇಕು. ಇವರ ಜೋತೆಗೆ ಓಂಬಡ್ಸ್‌ಮಾನ್‌ನನ್ನು ಕೂಡಾ ನೇಮಿಸಬೇಕು.
  8. ಕಾಮಗಾರಿಗಳ ಬಗ್ಗೆ, ಹಣ ಸದುಪಯೋಗದ ಬಗ್ಗೆ ತಾಂತ್ರಿಕವಾಗಿ ಪರಿಣಿತವಾಗಿರುವ ಸಂಸ್ಥೆ, ಕಾಲೇಜುಗಳ ಮೂಲಕ ೩ನೇ ವ್ಯಕ್ತಿ ಪರಿಶೀಲನೆಯನ್ನು (3rd Party Inspection) ಖಡ್ದಾಯ ಮಾಡಬೇಕು

(ಶೋಭಾ ಕರಂದ್ಲಾಜೆ)

Quotes

Every artist was first anamateur.

— Ralph Waldo Emerson

Newsletter

Get latest updates of my blog, news, media watch in your email inbox. subscribe to my newsletter