Shobha Karndlaje

Untitled-2

BJP Karnataka

ಮಾನಸ ಸರೋವರ ಕೈಲಾಸ ಪರಿಕ್ರಮ

ಮಾನಸ ಸರೋವರ ಕೈಲಾಸ ಪರಿಕ್ರಮ ಒಂದು ರೋಚಕ ಅನುಭವ. ಕಳೆದ ಹತ್ತು ವರ್ಷಗಳಿಂದ ಮಾನಸ ಸರೋವರವನ್ನು ಮತ್ತು ಕೈಲಾಸವನ್ನು ಭಾರತ ಕಳೆದುಕೊಂಡಿದರ ಬಗ್ಗೆ ಒಂದಿಲ್ಲ ಒಂದು ವೇದಿಕೆಯಲ್ಲಿ ಭಾಷಣ ಮಾಡ್ತಿದ್ದೆ.

1962ರ ಭಾರತ-ಚೀನಾ ಯುದ್ದದಲ್ಲಿ ನಮ್ಮ ಶ್ರದ್ದಾ ಕೇಂದ್ರ, ಪವಿತ್ರ ಕ್ಷೇತ್ರವನ್ನು ಅಲ್ಲಿ ಒಂದು ಹುಲ್ಲುಕಡ್ಡಿಯು ಬೆಳೆಯುವುದಿಲ್ಲ ಎಂಬ ಹೇಳಿಕೆಯನ್ನು ಪಾರ್ಲಿಮೆಂಟ್‌ಲ್ಲಿ ನೀಡಿ ಹೇಗೆ ಕೈಲಾಸವನ್ನು ನಮ್ಮ ನಾಯಕರು ಅನಾಯಸವಾಗಿ ಬಿಟ್ಟು ಕೊಟ್ಟರು ಎಂಬುದನ್ನು ಸಾಧ್ಯವಾದ ಕಡೆಯೆಲ್ಲಾ ಹೇಳುತ್ತಿದ್ದೆ. ಪ್ರತಿಬಾರಿಯೂ ಭಾಷಣ ಮಾಡುವಾಗ ನಾನೂ ಅಲ್ಲಿ ಹೋಗಿ ನೋಡಿ ಬರಬೇಕು ಎಂಬ ಭಾವನೆ ಬರ್ತಾ ಇತ್ತು. ಕಳೆದ ವರ್ಷ ಹೊಗಲೇಬೇಕು ಎಂಬ ಪ್ರಯತ್ನ ಮಾಡಿದ್ದೆ. ಆದರೆ ಚೀನಾ ಸರ್ಕಾರ ಹೆಚ್ಚು ಮಂದಿಗೆ ಅವಕಾಶ ಕೊಟ್ಟಿರಲಿಲ್ಲ. ಅದಕ್ಕಾಗಿ ಈ ವರ್ಷ ಮೇ ತಿಂಗಳಲ್ಲಿ ಮಾನಸ ಸರೋವರ ಕೈಲಾಸ ಪ್ರವಾಸ ಆರಂಭವಾಗುತ್ತಿದ್ದಂತೆ ಹೋಗಲೇಬೇಕೆಂಬ ದೃಢ ಸಂಕಲ್ಪ ಹೊಂದಿದ್ದೆ. ಪರಶಿವನ ಕೃಪೆಯಿಂದ ಹೋಗಿ ಬಂದು ನಿಮ್ಮ ಜೊತೆ ಅನುಭವ ಹಂಚಿಕೊಳ್ಳುವ ಸದಾವಕಾಶ ಸಿಕ್ಕಿದೆ.

ಬೆಂಗಳೂರಿನಿಂದ ದೆಹಲಿ, ದೆಹಲಿಯಿಂದ ಕಠ್ಮಂಡುವಿಗೆ ಪ್ರಯಾಣ. ಕಠ್ಮಂಡುವಿನಲ್ಲಿ ಮುಂದಿನ ಪ್ರಯಾಣಕ್ಕೆ ಬೇಕಾದ ಸೂಚನೆಗಳನ್ನು ಟ್ರಾವಲ್ಸ್ ನವರು ಒದಗಿಸುತ್ತಾರೆ. ಅಲ್ಲಿಂದ ಮುಂದೆ ವಾಹನದ ಮೂಲಕ ಹೋಗುವರಿಗೆ ಅವರೇ ಕರೆದೊಯ್ಯೂತ್ತಾರೆ. ನಮ್ಮ 20 ಜನರ ತಂಡ ವಿಮಾನ ಮತ್ತು ಹೆಲಿಕ್ಯಾಪ್ಟರ್‌ನ ಮೂಲಕ ಅರ್ಧ ದಾರಿ ಕ್ರಮಿಸಬೇಕಾಗಿತ್ತು. ಕಠ್ಮಂಡುವಿನಿಂದ ನೇಪಾಳ್‌ಗಂಜ್‌ಗೆ  ಸುಮಾರು ಒಂದು ಗಂಟೆ ಪ್ರಯಾಣ. ನೇಪಾಳ ಗಂಜ್‌ಗೆ ತಲುಪಿ ಅಲ್ಲೇ ವಸತಿ, ಮರುದಿನ ಬೆಳಿಗ್ಗೆ ನೇಪಾಳ್‌ಗಂಜ್‌ನಿಂದ ಸೀಮಿಳ್‌ಕೋಟ್‌ಗೆ ವಿಮಾನದಲ್ಲಿ ಸುಮಾರು ಒಂದು ಗಂಟೆ ಪ್ರಯಾಣ. ನೇಪಾಳ್‌ಗಂಜ್‌ನಿಂದ ಸೀಮಿಳ್‌ಕೋಟೆಗೆ ಬೆಳಿಗ್ಗೆ ಮಾತ್ರ ವಿಮಾನ ಪ್ರಯಾಣವಿರುತ್ತದೆ. ಅಲ್ಲಿಂದ ಹೆಲಿಕಾಪ್ಟರ್ ನಲ್ಲಿ ನೇಪಾಳ-ಚೀನಾದ ಬೋರ್ಡರ್ ಹಿಲ್ಸಾ ಅನ್ನುವ ಜಾಗಕ್ಕೆ ಸುಮಾರು 25 ನಿಮಿಷಗಳ ಪ್ರಯಾಣ. ನೇಪಾಳ್‌ಗಂಜ್ ತನಕ ಏನೋ ಸುಖಕರ ಪ್ರಯಾಣ ಅನ್ನಬಹುದು. ಆದರೆ ನೇಪಾಳ್‌ಗಂಜ್‌ನಿಂದ ಸೀಮಿಳ್‌ಕೋಟೆಗೆ ಹೋಗುವ ಸಣ್ಣ ವಿಮಾನಗಳು ಅತ್ಯಂತ ಅಸುರಕ್ಷಿತ. ಅತ್ಯಂತ ಹಳೆಯದಾದ ನಿರ್ವಹಣೆ ಇಲ್ಲದ ವಿಮಾನಗಳು. ವಿಮಾನದಲ್ಲಿ ಬಾಗಿಲು ಸರಿಯಾಗಿ ಇಲ್ಲ ಅನ್ನುವ ಸ್ಥಿತಿ. ಅದೇಗೋ ಸೀಮಿಳ್‌ಕೋಟ್ ತಲುಪುತ್ತಿದ್ದೇವೆ ಅನ್ನುವ ಸೂಚನೆ ಬರುತ್ತಿದ್ದಂತೆ ವಿಮಾನ ಕೆಳಗಿಳಿಯುತ್ತಿದೆಯೆಂದು ನೋಡಿದರೆ ರನ್‌ವೇನೇ ಇಲ್ಲ. ಬರೀ ಪರ್ವತಗಳು, ಕಲ್ಲು ಬಂಡೆಗಳು. ಆಶ್ಚರ್ಯವೆಂದರೆ ಸೀಮಿಳ್‌ಕೋಟ್‌ನಲ್ಲಿ ವಿಮಾನಕ್ಕೆ ರನ್‌ವೇ ಇಲ್ಲ, ಕಲ್ಲು ಮಣ್ಣಿನ ಮೇಲೇನೆ ಇಳಿಯುತ್ತದೆ. ಆ ಧೂಳಿನ ಮಧ್ಯವೇ ವಿಮಾನ ಓಡುತ್ತದೆ. ಎ.ಟಿ.ಆರ್, ಕಂಟ್ರೋಲ್ ರೂಮ್ ಪ್ರಶ್ನೆನೇ ಇಲ್ಲ. ಪರ್ವತದ ತುದಿಯಲ್ಲಿ ಇಷ್ಟು ಅಸುರಕ್ಷಿತವಾದ ಪ್ರದೇಶದಲ್ಲಿ ಮತ್ತು ಮೂಲಭೂತ ಸೌಲಭ್ಯಗಳೇ ಇಲ್ಲದೆ ವಿಮಾನ ಇಳಿಸುತ್ತಾರೆ. ಪೆಟ್ರೋಲ್ ತುಂಬಿಸುವುದು ಕ್ಯಾನ್‌ಗಳಲ್ಲಿ! ಏನೇ ತೊಂದರೆ ಆದರೂ ಹೇಳುವವರು ಇಲ್ಲ, ಕೇಳುವವರು ಇಲ್ಲ. ಎಲ್ಲಾರು ಶಿವನ ಪಾದಕ್ಕೆ ಸಮರ್ಪಿತವಷ್ಟೇ. ಅಲ್ಲಿಂದ ಹೆಲಿಕಾಪ್ಟರ್ ನ ರಸ್ತೆ ಹತ್ತಿರವಿದ್ದರೂ ತುಂಬಾ ಅಪಾಯ. ಬೆಟ್ಟದ ಸಾಲುಗಳನ್ನು ನುಸುಳಿಕೊಂಡು ಹಿಲ್ಸಾ ತಲುಪುವಾಗ ಅಬ್ಬಾ, ಬಚಾವಾದ್ವಿ ಅನ್ನಿಸುತ್ತದೆ.

ಅಲ್ಲಿಂದ ಒಂದು ತೂಗುಸೇತುವೆ ದಾಟಿದರೆ ಟಿಬೆಟ್‌ನ ಭೂಪ್ರದೇಶ. ಚೀನಾ ಆಕ್ರಮಿತ ಟಿಬೆಟ್. ಟಿಬೆಟ್ ಅನ್ನಿಸಿಕೊಳ್ಳಲು ಅಲ್ಲಿ ಯಾವ ಕುರುಹು ಉಳಿದಿಲ್ಲ. ಎಲ್ಲಾವೂ ಚೀನಾಮಯ ಅಲ್ಲಿಂದಲೇ ಚೀನಾದ ಕಾರುಬಾರು ಆರಂಭ. ಪಾಸ್‌ಪೋರ್ಟ್, ವೀಸಾ ಪರೀಕ್ಷೆಗೆ ಕುರಿಗಳಂತೆ ಏನಾಗುತ್ತೋ ಎಂದು ಕೈಕಟ್ಟಿ ಕಾಯುವ ಪರಿಸ್ಥಿತಿ. ಪಾಸ್‌ಪೋರ್ಟ್ ನಮ್ಮ ಕ್ಯಾಮರಾ, ಲ್ಯಾಪ್‌ಟಾಪ್, ವೀಡಿಯೋ ಕ್ಯಾಮರಾ, ಬ್ಯಾಗ್ ಪರೀಕ್ಷೆಗಳಲ್ಲಿ ಪಾಸಾದಾಗ ಅಪ್ಪ! ಮಾನಸ ಸರೋವರಕ್ಕೆ ಹೋಗಲು ನಾನು ಪಾಸು ಎಂಬ ಭಾವನೆ ಮೂಡುತ್ತದೆ. ಅದಾದ ಮೇಲೆನೂ ರಸ್ತೆನಲ್ಲಿ ಒಂದಾದ ಮೇಲೊಂದು ಪರಿವೀಕ್ಷಣೆಗಳು. ಅಲ್ಲಿಂದ 2 ಗಂಟೆಗಳ ರಸ್ತೆಯ ಹಾದಿಯಲ್ಲಿ ತಕ್ಕಲಕೋಟೆ ತಲುಪುತ್ತೇವೆ.

ತಕ್ಕಲಕೋಟೆಯಲ್ಲಿ 24 ಗಂಟೆಗಳ ಕಾಲ ನಮಗೆ ಆಮ್ಲಜನಕದ ಹೊಂದಾಣಿಕೆಗಾಗಿ ಇರಿಸಲಾಗುತ್ತದೆ. ಅದೊಂದು ಚಿಕ್ಕ ಪಟ್ಟಣ. ಓಡಾಡಲು ಅವಕಾಶ ಸಿಗುತ್ತದೆ. ಅಲ್ಲಿಂದ ನಮ್ಮ ಮುಂದಿನ ಪ್ರಯಾಣವೇ ಮಾನಸ ಸರೋವರಕ್ಕೆ. ಒಂದು ಗಂಟೆ ಪ್ರಯಾಣ. ತುಂಬಾ ನಾಜೂಕಾದ ಒಳ್ಳೆಯ ರಸ್ತೆ. ದಾರಿಯಲ್ಲಿ ರಮಣಿಯವಾಗಿ ಕಾಣುತ್ತಿರುವ ಹಿಮಾಲಯದ ಪರ್ವತ ಶ್ರೇಣಿಗಳು. ಮರುಭೂಮಿಯಂತಹ ವಿಶಾಲವಾದ ಭೂಮಿ. ಗಾಳಿ ಬಂದರೆ ವಿಪರೀತವಾದ ಧೂಳೇಳುವಂತಹ ಭೂಪ್ರದೇಶ. ಹೋಗುತ್ತಿದ್ದಂತೆ ದಾರಿಯಲ್ಲೇ ಕಡುನೀಲಿ ಬಣ್ಣದ ಸರೋವರ. ದೂರದಲ್ಲಿ ಕೈಲಾಸ ಪರ್ವತ. ಇದೇ ಮಾನಸ ಸರೋವರವೇನೋ ಅನ್ನಿಸುತ್ತದೆ. ಅದರೆ ಅದಲ್ಲ. ಅದಕ್ಕೆ ರಾಕ್ಷಸ ಸ್ಥಳ ಅಂತಾರೆ. ಆತ್ಮಲಿಂಗ ಪಡೆಯಲು ಲಂಕೆಯಿಂದ ಇಲ್ಲಿಗೆ ಬಂದ ರಾವಣ ಶಿವನನ್ನು ಕುರಿತು ಕಠಿಣವಾದ ತಪಸ್ಸನ್ನು ಅಚರಿಸಿದ ಸ್ಥಳ ಇದು ಅನ್ನುತ್ತಾರೆ. ತುಂಬಾ ಒಳ್ಳೆಯ ಜಾಗವನ್ನೇ ರಾವಣ ಅಯ್ಕೆ ಮಾಡಿಕೊಂಡಿದ್ದಾನೆ. ಅಲ್ಲಿ ಕುಳಿತರೆ ನೇರವಾಗಿ ಕೈಲಾಸ ಪರ್ವತ ಕಾಣುತ್ತದೆ. ಶಿವ ಬೆಳಿಗ್ಗೆ ಎದ್ದರೆ ರಾವಣನನ್ನೇ ನೋಡಬೇಕು. ಇಂತಹ ಸುಂದರವಾದ ಜಾಗದಲ್ಲಿ ಸುಂದರವಾದ ಸರೋವರವಿದೆ. ಇಲ್ಲಿತನಕ  ಯಾರೂ ಸ್ನಾನ ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ಅದನ್ನು ವೀಕ್ಷಿಸಿಕೊಂಡು ಮುಂದೆ ಸಾಗಬೇಕು. ದೂರದಲ್ಲಿ ಮಾನಸ ಸರೋವರ ಕಾಣುತ್ತದೆ. ನೋಡುತ್ತಿದ್ದಂತೆ ಮೈ ಪುಳಕಿತಗೊಳ್ಳುತ್ತದೆ. ಅಬ್ಬಾ…! ಸರೋವರ ಇಷ್ಟೊಂದು ದೊಡ್ಡದ್ದಾಗಿದೆಯಾ?. ಇಷ್ಟೊಂದು ಸುಂದರವಾಗಿದೆಯಾ? ಅನ್ನಿಸುತ್ತದೆ. ಮರುಭೂಮಿಯಂತಹ ವಿಶಾಲ ಭೂಮಿ, ಸುತ್ತಲೂ ಬಿಳಿಯ ಹಿಮಾಲಯ ಪರ್ವತ ಮಧ್ಯದಲ್ಲಿ ಕಡು ನೀಲಿ ಬಣ್ಣದ 62 ಕಿ.ಮೀ. ಸುತ್ತಳತೆಯುಳ್ಳ ವಿಶಾಲವಾದ ಮಾನಸ ಸರೋವರ. ಎಂತಹ ಕಲ್ಪನೇ ಬ್ರಹ್ಮನದು! ಸುಂದರವಾದ ಭೂಮಿ, ಪರ್ವತಗಳನ್ನು ನೋಡಿದ ಬ್ರಹ್ಮ ಇಲ್ಲೊಂದು ಸರೋವರ ಇರಬೇಕೆಂದು ಮನಸ್ಸಲ್ಲೆ ಕಲ್ಪಿಸಿಕೊಂಡು ನಂತರ ಇಲ್ಲಿ ಇದನ್ನು ಸೃಷ್ಟಿ ಮಾಡಿದ ಎಂದು ಪುರಾಣ ಹೇಳುತ್ತದೆ. ದಕ್ಷಯಜ್ಷದಲ್ಲಿ ಶಿವನಿಗಾದ ಅವಮಾನಕ್ಕಾಗಿ  ದಾಕ್ಷಾಯಿಣಿ ಹೋಮಕುಂಡಕ್ಕೆ ಬಿದ್ದು ಪ್ರಾಣ ಕಳೆದುಕೊಳ್ಳುತ್ತಾಳೆ. ಸತ್ತ ಪಾರ್ವತಿಯ ಹೆಣವನ್ನಿಟ್ಟುಕೊಂಡು ಶಿವ ರೋದಿಸುತ್ತಾನೆ. ಜಗತ್ತಿನ ಎಲ್ಲಾ ಕ್ರಿಯೆಗಳು ನಿಂತುಹೋಗುತ್ತವೆ. ಇದನ್ನಿರಿತ ವಿಷ್ಣು ದಾಕ್ಷಾಯಿಣಿಯ ದೇಹವನ್ನು ತನ್ನ ಸುದರ್ಶನ ಚಕ್ರದಿಂದ 52 ತುಂಡು ಮಾಡುತ್ತಾನೆ. ಇದು ಭೂಮಿಯ ಬೇರೆ ಬೇರೆ ಜಾಗದಲ್ಲಿ ಬೀಳುತ್ತವೆ. ದಾಕ್ಷಾಯಿಣಿಯ ಬಲಕೈ ಮಾನಸ ಸರೋವರಕ್ಕೆ ಬಿತ್ತು ಎಂಬುದನ್ನು ಹೇಳುತ್ತಾರೆ. ಇದೊಂದು ಶಕ್ತಿ ಕೇಂದ್ರನೂ ಹೌದು. ಎಲ್ಲಾ ದೇವನೂ ದೇವತೆಗಳು, ಋಷಿ ಮುನಿಗಳು ಇಲ್ಲಿ ಬಂದು ಸ್ನಾನ ಮಾಡುತ್ತಾರೆ ಎಂಬ ಪ್ರತೀತಿಯಿದೆ. ಆ ಸರೋವರ ನೋಡುತ್ತಿದ್ದಂತೆ ಭಕ್ತಿಭಾವನೆ ಮೂಡುತ್ತದೆ. ಹೋಗಿ ನೀರಲ್ಲಿ ಮುಳುಗಿ ಬರೋಣ ಅನ್ನಿಸುತ್ತದೆ. ಸರೋವರದ ಪಕ್ಕದಲ್ಲೇ ಇರುವ ಮಣ್ಣಿನಿಂದ ಕಟ್ಟಲಾದ ಮನೆಗಳಲ್ಲಿ ನಮ್ಮನ್ನು ಇಳಿಸಲಾಯಿತು. ಅದೊಂದು ಡೊರ್ಮೆಟರಿ. ಒಂದು ಕೊಠಡಿಯಲ್ಲಿ 5-6 ಜನ ಇರಬೇಕು. ಮೂಲಭೂತ ಸೌಲಭ್ಯಗಳೆನೂ ಇಲ್ಲ. ನಮ್ಮ ದೇಶದ ಹಳ್ಳಿಯಂತೆ ಅಲ್ಲಿನ ಶೌಚಾಲಯದ ವ್ಯವಸ್ಥೆ. ಬಯಲೇ ಗತಿ. ಮೈಕೊರೆಯುವ ಚಳಿ. ರಭಸವಾಗಿ ಬಿಸುವ ಹಿಮಗಾಳಿ. ಮಾನಸ ಸರೋವರಕ್ಕೆ ಹೋಗಿ ಸ್ನಾನ ಮಾಡೋಣ ಎಂದು ಹತ್ತಿರ ಹೋದರೆ ಶಾಕ್ ಹೊಡೆದಂತಾಗುತ್ತದೆ. ಅಂತಹ ಚಳಿ. ಆ ಗಾಳಿ ಮತ್ತು ಶೀತನೀರು ಇವೆರಡು ಸೇರಿ ಮೈ ಮರಗಟ್ಟುತ್ತದೆ. ಅದರೂ ಸ್ನಾನ ಮಾಡಬೇಕೆಂಬ ತವಕದಿಂದ ಸ್ನಾನ ಮಾಡಿದೇವು. ಮುಂದೆ 2-3 ಗಂಟೆ ಕೈಕಾಲುಗಳು ಅಲ್ಲಾಡಲೇ ಇಲ್ಲ. ಚಳಿಗೆ ವೀಪರಿತವಾದ ತಲೆನೋವು ಬರುತ್ತದೆ. ಜೊತೆಗೆ ಆಮ್ಲಜನಕದ ಕೊರತೆನೂ ತೊಂದರೆ ಕೊಡುತ್ತದೆ. ಇಲ್ಲಿ ಒಮ್ಮೆ ಸ್ನಾನ ಮಾಡಿ ಬಟ್ಟೆ ಬದಲಾಯಿಸಿದರೆ ಮುಂದೆ ಪರಿಕ್ರಮ ಮುಗಿಸಿ ವಾಪಸ್ಸು ಮಾನಸ ಸರೋವರ ಬರುವ ತನಕ ಬಟ್ಟೆ ಬದಲಾಯಿಸುವ ಪ್ರಶ್ನೆನೇ ಇಲ್ಲ. ಹಾಕಿದ ಬಟ್ಟೆ ಮೇಲೆನೇ ಇನ್ನೊಂದನ್ನು, ಮತ್ತೊಂದನ್ನು ಹಾಕಿಕೊಳ್ಳಬೇಕು ಅನ್ನುವಷ್ಟು ಚಳಿ. ಆ ದಿನ ಅಲ್ಲೇ ಉಳಿದು ಮರುದಿನ ಬೆಳಗ್ಗಿನ ಜಾವ ಅಷ್ಟಪಾದಕ್ಕೆ ತೆರಳುವ ತವಕ. ಅಲ್ಲಿಂದ ಸುಮಾರು 2 ಗಂಟೆಯ ಪ್ರಯಾಣ. ಅಷ್ಟಪಾದದಿಂದ ಕೈಲಾಸದ ಎದುರು ಭಾಗವನ್ನು ಹತ್ತಿರದಿಂದ ನೋಡಬಹುದಾದಂತಹ ಬೆಟ್ಟ. ಅಷ್ಟಪಾದ ಬೆಟ್ಟದಲ್ಲಿ ಜೈನ ತೀರ್ಥಂಕರರೋಬ್ಬರು ತಪಸ್ಸು ಮಾಡಿದ್ದರು ಎಂದು ಹೇಳುತ್ತಾರೆ. ಕೈಲಾಸದ ಸುತ್ತ ಮುತ್ತಲಿನ ಎಲ್ಲಾ ಬೆಟ್ಟಗಳಲ್ಲೂ ಭೌದ್ಧರ ಒಂದಲ್ಲ ಒಂದು ಕುರುಹು ಇದೆ. ಇಲ್ಲೂ ಇದೆ. ಅಷ್ಟಪಾದಕ್ಕೆ ವಾಹನದಲ್ಲಿ ಹೋಗಿ ಒಂದು ಚಿಕ್ಕದಾದ ಬೆಟ್ಟ ಹತ್ತಿದರೆ ಕೈಲಾಸ ಪರ್ವತದ ಎದುರು ಭಾಗ ಸ್ಪಷ್ಟವಾಗಿ ಕಾಣುತ್ತದೆ. ಕೈಲಾಸ ಬೆಟ್ಟದ ಎದುರಿಗೆ ಒಂದು ಚಿಕ್ಕ ಬೆಟ್ಟ. ಶಿವನ ದೇವಸ್ಥಾನದ ಎದುರು ನಂದಿ ಮಂಟಪವನ್ನು ಹೋಲುವ ಬೆಟ್ಟ. ಪ್ರಕೃತಿಯ ಅದ್ಭುತ ಸೃಷ್ಟಿ. ಸದಾ ಹಿಮದಿಂದ ಕೂಡಿರುವ ಕೈಲಾಸ ಬೆಟ್ಟ. ಹಿಮದಲ್ಲೇ ಮೂಡುವ ವಿವಿಧ ಆಕೃತಿಗಳು ಆಸ್ತಿಕರನ್ನು ಪುಳಕಿತರನ್ನಾಗಿ ಮಾಡುತ್ತದೆ. ಎದುರುಗಿರುವ ನಂದಿ ಬೆಟ್ಟ ತುಂಬಾ ಚೆನ್ನಾಗಿ ಸ್ಪಷ್ಟವಾಗಿ ಕಾಣುತ್ತದೆ. ಅಲ್ಲಿಂದ ಇಳಿದು ಬಂದು ಮತ್ತೆ ವಾಹನದಲ್ಲಿ ಕುಳಿತರೆ ಇನ್ನೊಂದು ಗಂಟೆ ಪ್ರಯಾಣ ಮಾಡಿದರೆ ತಾರ್ಬೂಚೆ ಅನ್ನುವ ಜಾಗಕ್ಕೆ ಕರೆದುಕೊಂಡು ಬರುತ್ತಾರೆ. ಅದಕ್ಕೆ ‘ಯಮದ್ವಾರ’ ಅಂತಲೂ ಕರೆಯುತ್ತಾರೆ. ಪಾಂಡವರು ತಮ್ಮ ಕೊನೆ ಕಾಲದಲ್ಲಿ ಈ ದಾರಿ ಮೂಲಕವೇ ಕೈಲಾಸಕ್ಕೆ ಹೋದರು ಎಂಬ ಪ್ರತೀತಿನೂ ಇದೆ. ಯಮದ್ವಾರದ ಸ್ವಲ್ಪ ಮುಂದಕ್ಕೆ ಸೆರ್ಪಾಗಳು ಕುದುರೆ ಸಮೇತ ಕಾಯುತ್ತಿರುತ್ತಾರೆ. 40 ಕಿ.ಮೀ ದೂರದ ಕೈಲಾಸ ಪರ್ವತ ಪರಿಕ್ರಮವನ್ನು ನಡೆದೇ ಮಾಡುತ್ತೇವೆ ಎಂಬ ಧೈರ್ಯವಿದ್ದರೂ ಕುದುರೆ ತೆಗೆದುಕೊಳ್ಳುವುದು ಸೂಕ್ತ. ಒಂದು ಸಾರಿ ಕುದುರೆ ಇಲ್ಲದೆ ಮುಂದಕ್ಕೆ ನಡೆದು ಹೋದರೆ ಮಧ್ಯದಲ್ಲಿ ಬೇಕು ಅಂದರೂ ಸಿಗುವುದಿಲ್ಲ. ಅದಕ್ಕಾಗಿ ಅಲ್ಲಿ ಕುದುರೆ, ಕುದುರೆಗೊಬ್ಬ ವ್ಯಕ್ತಿ ಮತ್ತು ನಮ್ಮ ಬ್ಯಾಗ್ ಹಿಡಿಯಲು ಒಟ್ಟು ಪೋರ್ಟರ್ (ಪಿಟ್ಟು) ವನ್ನು ಪಡೆದು ಮುಂದೆ ಸಾಗಬೇಕಾಗುತ್ತದೆ. ಮೊದಲ ದಿನ ಯಮದ್ವಾರದಿಂದ ರಾತ್ರಿ ಉಳಿಯುವ ಜಾಗ ದಿರಾಪುಕ್‌ಗೆ  13 ಕಿ.ಮೀ ದಾರಿ ನಡೆದು ಹೋಗಬಹುದು. ಕುದುರೆಯಲ್ಲಾದರೂ ಹೋಗಬಹುದು.

ಸಮತಟ್ಟಾದ ಪ್ರದೇಶದಲ್ಲಿ ಬೆಟ್ಟಗಳ ಮಧ್ಯೆ ನಡೆಯಬಹುದು. ದಿರಾಪುಕ್ ಸಮುದ್ರ ಮಟ್ಟಕ್ಕಿಂತ 16,500 ಅಡಿ ಎತ್ತರದಲ್ಲಿದೆ. ಆಮ್ಲಜನಕದ ಕೊರತೆ ನಮ್ಮನ್ನು ಕಾಡಲು ಆರಂಭವಾಗುತ್ತದೆ. ಎತ್ತರಕ್ಕೆ ಹತ್ತುವ ದಾರಿ ಬಂದಾಗ ಒಂದು ಹೆಜ್ಜೆ ಇಡಲು ಕಷ್ಟ ಅನ್ನಿಸುತ್ತದೆ. ಪರ್ವತದ ಮಧ್ಯದ ದಾರಿಯಾದ ಕಾರಣ ನದಿ ಹರಿಯುತ್ತಿರುತ್ತದೆ. ಬಹಳ ಜಾಗದಲ್ಲಿ ನೀರು ಹೆಪ್ಪುಗಟ್ಟಿರುತ್ತದೆ. ಹಿಮಗಾಳಿ, ಹಿಮಪಾತ ಎಲ್ಲಾವೂ ಆಗುತ್ತದೆ. ಆ ದಿನ ಸಂಜೆಯ ವೇಳೆಗೆ ದಿರಾಪುಕ್‌ಗೆ ತಲುಪುತ್ತೇವೆ. ಕೈಲಾಸ ಬೆಟ್ಟದ ಹಿಂಬದಿ ಎಂದು ಅದನ್ನು ಹೇಳುತ್ತಾರೆ. ಇಡೀ ಪರಿಕ್ರಮದಲ್ಲಿ ಅತೀ ಹತ್ತಿರದಿಂದ ಕೈಲಾಸ ಪರ್ವತವನ್ನು ನಾವು ಇಲ್ಲಿಂದ ನೋಡಬಹುದು. ಅಲ್ಲೂ ಮಣ್ಣಿನ ಮನೆಗಳು. ನಮ್ಮ ವಸತಿಯ ಪಕ್ಕದಲ್ಲಿರುವ ಚಿಕ್ಕ ಬೆಟ್ಟವನ್ನು ಹತ್ತಿದರೆ ಕೈಲಾಸ ಪರ್ವತವನ್ನು ಹತ್ತಿರದಿಂದ ನೋಡಬಹುದು. ಶಿವನ ಕೊರಳಲ್ಲಿರುವ ಶೇಷನಾಗನಂತೆ ಇಲ್ಲಿ ಹಿಮದ ಆಕಾರ ಬೆಟ್ಟದ ತುದಿಯಲ್ಲಿ ಕಾಣುತ್ತದೆ. ತುಂಬಾ ಆನಂದ ಕೊಡುವ ಜಾಗ. ಆದರೆ ನಾವು ಸಹಿಸಿಕೊಳ್ಳಲಾರದಷ್ಟು ಚಳಿಗಾಳಿ, ಆಮ್ಲ ಜನಕದ ಕೊರತೆಯಿದೆ. ನಾವು ಅಲ್ಲಿದ್ದ ದಿನ -20’C ಉಷ್ಣತೆ  ಇತ್ತು. ಜೊತೆಗೆ ವಿಪರೀತವಾದ ತಲೆನೋವು ಬರುತ್ತದೆ. ಯಾವಾಗ ಬೆಳಕು ಹರಿಯುತ್ತೋ ಅನ್ನಿಸುತ್ತದೆ.

ಬೆಳಿಗ್ಗೆ ಬೇಗನೇ ಎದ್ದು ದಿರಾಪುಕ್‌ನಿಂದ ದೋಲ್ಮಾಲಾ ಪಾಸ್, ಗೌರಿಕುಂಡದ ಮುಖಾಂತರ ತುಜುಲ್‌ಪುಕ್‌ಗೆ ಹೋಗಬೇಕಾಗುತ್ತದೆ. ಎರಡನೇ ದಿನದ ಪ್ರಯಾಣ ಬಹಳ ಕಠಿಣವಾದುದು.

22 ಕಿ.ಮೀನ ದಾರಿ ಅದು. ಕಡಿದಾದ ಬೆಟ್ಟಗಳು. ಹಿಮದ ರಾಶಿಯ ಮಧ್ಯ ನಡೆಯಬೇಕು. ಎತ್ತರವಾದ ಪರ್ವತವನ್ನು ಹತ್ತಿ ಇಳಿಯಬೇಕು. ಬೆಟ್ಟ ಹತ್ತಲು ಸ್ವಲ್ಪ ದೂರ ಕುದುರೆಗಳನ್ನು ಉಪಯೋಗಿಸಬಹುದು. ಇಳಿಯುವ ದಾರಿ ಭಾರೀ ಕಷ್ಟದ್ದು. ಕುದುರೆಗಳು ನಮ್ಮನ್ನು ಹೊತ್ತುಕೊಂಡು ಹೋಗಲ್ಲ. ಹೋದರೆ ಮುಗ್ಗರಿಸಬಹುದು. ಬಹು ಅಪಾಯ ಅದು. ನಾವೇ ನಿಧಾನಕ್ಕೆ ಹೆಜ್ಜೆಗೆ ಹೆಜ್ಜೆಯಿಟ್ಟು ಜಾಗರೂಕತೆಯಿಂದ ಇಳಿಯಬೇಕು. ಆದರೆ ಪ್ರಕೃತಿಯ ಸೌಂದರ್ಯ ಮಾತ್ರ ಎಂತಹವರನ್ನು ಮಂತ್ರ ಮುಗ್ಧರನ್ನಾಗಿ ಮಾಡುತ್ತದೆ. ದೋಲ್ಮಾಲಾ ಪಾಸ್‌ಲ್ಲಿ ನಿಂತು ನೋಡಿದರೆ ಇದೇ ಸ್ವರ್ಗ ಅನ್ನಿಸುತ್ತದೆ. ಕೆಳಗೇನೇ ಗೌರಿಕುಂಡವಿದೆ. ನೀರು ಹೆಪ್ಪುಗಟ್ಟಿರುತ್ತದೆ. ಅಲ್ಲಿಯೇ ಪಾರ್ವತಿ ಶಿವನನ್ನು ಮದುವೆಯಾಗಲು ಕಠಿಣವಾದ ತಪಸ್ಸನ್ನು ಆಚರಿಸಿದಳು. ಗೌರಿಕುಂಡದಲ್ಲೇ ಸ್ನಾನ ಮಾಡುತ್ತಿದ್ದಳು ಅಂತಾರೆ. ಇಂತಹ ದುರ್ಗಮ ಪ್ರದೇಶದಲ್ಲಿ ಪಾರ್ವತಿ ಅಷ್ಟೋಂದು ಕಾಲ ತಪಸ್ಸು ಮಾಡಬೇಕಾಯಿತಾ? ಮನಸ್ಸಲ್ಲಿ ಬಂದು ಹೋಗುತ್ತದೆ.

ವಿಡಿಯೋ, ಪೋಟೋ ತೆಗೆಯಲು ನಮಗೆ ತಾಳ್ಮೆ ಇರಲಿಲ್ಲ. ಬೆರಳುಗಳು ಕೆಲಸ ಮಾಡಲ್ಲ ಅನ್ನುವ ಸ್ಥಿತಿ ಇರುತ್ತದೆ. ಆ ದಿನ ಸಮುದ್ರ ಮಟ್ಟಕ್ಕಿಂತ 18,600 ಅಡಿ ಎತ್ತರದಲ್ಲಿರುತ್ತೇವೆ. ಆ ಬೆಟ್ಟಗಳನ್ನು ಇಳಿದು ನಡೆದರೆ ಬೆಟ್ಟಗಳ ಸಾಲಿನ ಮಧ್ಯಭಾಗ ಸಿಗುತ್ತದೆ. ಸ್ವಲ್ಪ ಸಮತಟ್ಟಾದ ಪ್ರದೇಶ. ನಡೆದು ಹೋಗಬಹುದಾದ ಪ್ರದೇಶ. ರಮಣಿಯವಾದ, ಕಣ್ಣಿನ ಎಲ್ಲಾ ಪಾಪಗಳನ್ನು ತೊಳೆಯುವ ಸುಮದುರ ಬೆಟ್ಟ ಶ್ರೇಣಿಗಳು. ಜೀವನ ಸಾರ್ಥಕವಾಯಿತು ಅನ್ನುವ ಭಾವ ಮೂಡುತ್ತದೆ. ಆದಿನ 22 ಕಿ.ಮೀ ಕ್ರಮಿಸಿ ತುಜಲ್‌ಪುಕ್ ಎನ್ನುವ ಪ್ರದೇಶದಲ್ಲಿ ಉಳಿಯುತ್ತದೆ. ಅಲ್ಲಿ ಅತ್ಯಂತ ಹಳೆಯದಾದ ಬೌದ್ಧರ ಆಶ್ರಮವಿದೆ. ಅಲ್ಲಿ ಬೌದ್ಧರ ವಿಗ್ರಹಗಳು, ಅವರ ಗ್ರಂಥಗಳು ಇದೆ. ಮಣ್ಣಿನ ಮನೆಯಲ್ಲಿ ವಾಸ. ಪರಿಕ್ರಮ ನಾಳೆಗೆ ಮುಗಿದೆ ಹೋಗುತ್ತದೆ ಅನ್ನುವ ಸಂತೋಷ. ಮೂರನೇ ದಿನ ಬೆಳಿಗ್ಗೆ ಎದ್ದು ತುಜಲ್‌ಪುಕ್‌ನಿಂದ ಡಾರ್ಚನ್ ಕಡೆಗೆ ಪ್ರಯಾಣ 8 ಕಿ.ಮೀ ನ್ನು ನಡೆದು ಹೋಗಿ ಮುಂದೆ ವಾಹನದಲ್ಲಿ ಮಾನಸ ಸರೋವರಕ್ಕೆ ಬರಬೇಕು. ಆ ಕ್ಷಣ ನಿಜವಾಗಿಯೂ ಸಂತೋಷ ಕೊಡುತ್ತದೆ. ನಾವೂ ಏನೂ ತೊಂದರೆಯಿಲ್ಲದೆ ವಾಪಸ್ಸು ಹೋಗುತ್ತಿದ್ದೇವೆ ಎಂಬ ಸಂತಸ ಮೂಡುತ್ತದೆ. ಜೀವನ ಸಾರ್ಥಕ ಅನ್ನಿಸುತ್ತದೆ. ಪರಿಕ್ರಮ ನಮ್ಮನ್ನು ನಾವು ಅರಿವ ಸುಸಂದರ್ಭ. ಸಮಾಜ, ಸಂಸಾರಗಳ ಬಂಧನದಿಂದ ಹೊರಬಂದು ನಮ್ಮ ದೇಹ ಮತ್ತು ಜೀವವನ್ನು ಪ್ರಕೃತಿಯೊಂದಿಗೆ ಪಣಕ್ಕಿಟ್ಟು ಮಾಡುವಂತಹ ಯಾತ್ರೆ ಇದು. ಯಾವ ಸಂಧರ್ಭದಲ್ಲಿ ಏನೂ ಬೇಕಾದರೂ ಆಗಬಹುದು ಅನ್ನುವ ಪರಿಸ್ಥಿತಿ. ನಮಗಾಗಿ ಅಲ್ಲಿ ನಗುವವರು ಇರಲ್ಲ. ಅಳುವವರು ಇರಲ್ಲ. ಜಗತ್ತಿನ ಎಲ್ಲಾ ಸಂಪರ್ಕದಿಂದ ದೂರವಿರುತ್ತೇವೆ. ನಮ್ಮ ಒಳ್ಳೆಯದನ್ನು ಇನ್ನು ವಿಕಸಿತ ಮಾಡಲು, ಕೊರತೆಗಳನ್ನು ಅರಿತು ಅದಕ್ಕೆ ಉತ್ತರ ಹುಡುಕಲು ಸಕಾಲ. ಇಲ್ಲಿ ಒಂಟಿಯಾಗಿ ಚಲಿಸುವುದೇ ಖುಷಿ ಕೊಡುತ್ತದೆ. ಜಗತ್ತಿನ ಎಲ್ಲಾ ದೇಶಗಳಿಂದ ಆಸ್ತಿಕರು ಇಲ್ಲಿ ಬರುತ್ತಾರೆ. ವಸತಿಯ ಸಂದರ್ಭದಲ್ಲಿ ಅವರನ್ನು ಮಾತಾನಾಡಿಸಿದಾಗ ಶಿವನನ್ನು ನೋಡಲು ಬಂದಿದ್ದೇವೆ ಅಂದರು. ನಿಜವಾಗಲು ಆಶ್ವರ್ಯವಾಯಿತು. ಬೌದ್ದರಂತು ಅತ್ಯಂತ ಕಠಿಣವಾದ ಪರಿಕ್ರಮವನ್ನು ಮಾಡುತ್ತಾರೆ. ಹೆಜ್ಜೆಗೊಂದು ನಮಸ್ಕಾರ ಮಾಡಿ ತಿಂಗಳುಗಟ್ಟಲೆ ಕೈಲಾಸ ಸುತ್ತುತ್ತಾರೆ. ಬುದ್ದನೂ ಕೈಲಾಸದಲ್ಲೇ ತನ್ನ ಕೊನೆಯ ಪ್ರಯಾಣವನ್ನು ಮಾಡಿದ ಎಂಬ ಕಾರಣಕ್ಕಾಗಿ ಇಂದಿಗೂ ಬೌದ್ದ ಸಾಧುಗಳು ತಮ್ಮ ಕೊನೆಯ ದಿನಗಳಲ್ಲಿ ಇಲ್ಲಿ ಬಂದು ಕೈಲಾಸದ ಕಡೆಗೆ ಸಾಗುತ್ತಾ ಮರೆಯಾಗುತ್ತಾರೆ ಎಂದು ಸೇರ್ಪಾಗಳು ಹೇಳುತ್ತಾರೆ.

ಭಾರತೀಯರ ಅತ್ಯಂತ ಶ್ರೇಷ್ಠ ಪವಿತ್ರ ಸ್ಥಳ ಕೈಲಾಸ. ಆದರೆ ಜನರು ಮಾತ್ರ ಇಲ್ಲಿ ಹೋಗಲು ಬಹಳ ಹೆದರುತ್ತಾರೆ. ಅದು ಸತ್ಯ ಕೂಡಾ. ಧೈರ್ಯ ಮಾಡಿ ಹೋದವರಿಗೆ ಆಗುವ ಅನುಭವನೂ ಇದೆ ಆಗಿದೆ. ಆದರೆ ಸರ್ಕಾರ ಮನಸ್ಸು ಮಾಡಿದರೆ ಇದಕ್ಕೆ ಸ್ವಲ್ಪ ಮಟ್ಟಿಗಾದರೂ ಪರಿಹಾರ ದೊರಕಿಸಲು ಸಾಧ್ಯ. ಭಾರತ ಸರ್ಕಾರ ಮತ್ತು ಚೀನಾ ಮಾತುಕತೆಯಿಂದ ಇದು ಸಾಧ್ಯ. ಯಾವುದೇ ಜಾಗದಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲದ ಪ್ರದೇಶ ಇದು. ಕನಿಷ್ಟಪಕ್ಷ ವೈದ್ಯಕೀಯ ಸೌಲಭ್ಯಗಳನ್ನಾದರೂ ಇಲ್ಲಿ ನೀಡಬೇಕು. ಮಾನಸ ಸರೋವರ ಮತ್ತು ಕೈಲಾಸ ಪರಿಕ್ರಮದಲ್ಲಿ ಆರೋಗ್ಯ ಕೆಟ್ಟರೆ, ಆಮ್ಲಜನಕದ ಕೊರತೆ ಎದುರಾದರೆ ವೈದ್ಯಕೀಯ ಸೌಲಭ್ಯವನ್ನು ನೀಡುವ ತೀವ್ರ ಅಗತ್ಯತೆಯಿದೆ. ಕೇವಲ ಮೂರು ತಿಂಗಳಿಗೆ ತೆರೆದುಕೊಳ್ಳುವ ಯಾತ್ರೆ ಇದು. ಮೂರು ತಿಂಗಳ ತಾತ್ಕಾಲಿಕ ವ್ಯವಸ್ಥೆ ಬಗ್ಗೆ ಸರ್ಕಾರ ಯೋಚನೆ ಮಾಡಬೇಕು.

ಯಾತ್ರೆಗೆ ಟ್ರಾವಲ್ಸ್‌ಗಳ ಮೂಲಕವೇ ಎಲ್ಲಾರೂ ಅಲ್ಲಿಗೆ ಬರ್ತಾರೆ. ಇವರಂತೂ ವಿಪರೀತವಾಗಿ ಶೋಷಣೆ ಮಾಡುತ್ತಾರೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹಣ ಪಾವತಿ ಮಾಡುತ್ತಾರೆ. ನಿಗದಿತ ದರ ಇಲ್ಲ. ಅಷ್ಟು ಕೊಟ್ಟಮೇಲೂ ಪ್ರವಾಸದಲ್ಲಿ ಮತ್ತೇ ನಾವೇ ಹಣ ನೀಡಬೇಕಾದ ಪರಿಸ್ಥಿತಿ. ಇವರಿಗೆ Accountability ಇಲ್ಲವೆ ಇಲ್ಲ. ಬಹುತೇಕ ಎಲ್ಲಾ ಟ್ರಾವೆಲ್ಸ್‌ಗಳು ಭಾರತದ್ದು. ಈ ಶೋಷಣೆಯನ್ನು ತಪ್ಪಿಸುವ ಬಗ್ಗೆ ಸರ್ಕಾರ ಗಮನಿಸುವ ಅಗತ್ಯವಿದೆ.

ಭಾರತ ತನ್ನ ಭೂಪ್ರದೇಶವನ್ನು ಕಳೆದುಕೊಂಡು ಆಗಿದೆ. ಅಲ್ಲಿ ಹೋದಾಗ ಸ್ವಾತಂತ್ರ್ಯ ಬಂದ ಮೇಲೆ ಇದನ್ನು ಕಳೆದುಕೊಳ್ಳುವಷ್ಟು ನಾವು ದುರ್ಬಲವಾಗಿದ್ದೇವೆಯೇ ಎಂಬ ಪ್ರಶ್ನೆ ಮೂಡುತ್ತದೆ. ನಮ್ಮದೆ ದೇಶದ ಸಿಕ್ಕಿಂ, ಅರುಣಾಚಲ ಪ್ರದೇಶದ ಮೇಲೂ ಚೀನಾ ಕಣ್ಣು ಹಾಕಿದೆ. ಕಳೆದ ವರ್ಷ ಅರುಣಾಚಲ ಪ್ರದೇಶಕ್ಕೆ ನಮ್ಮ ಪ್ರಧಾನ ಮಂತ್ರಿ ಹೋಗಲು ಚೀನಾ ತಕರಾರು ತೆಗೆದಿತ್ತು. ಪ್ರತಿಯೊಬ್ಬ ಭಾರತೀಯನೂ ಕೈಲಾಸ ಪರಿಕ್ರಮಕ್ಕೆ ಹೋಗಬೇಕು ಮತ್ತು ನಮ್ಮ ಗಡಿಗಳ ರಕ್ಷಣೆಗಾಗಿ ಸಂಕಲ್ಪ ಮಾಡಬೇಕು. ಈಗಿರುವ ಭಾರತ ನಮ್ಮದೇ. ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿಯೂ ನಮ್ಮದೆ. ಆ ಶಕ್ತಿಯನ್ನು ಪರಶಿವನು ನಮಗೆ ಕೊಡಲಿ.
ನಮಃ ಶಿವಾಯ

Quotes

My father was a statesman, I ama political woman. My father was a saint. I am not.

— Indira Gandhi

Newsletter

Get latest updates of my blog, news, media watch in your email inbox. subscribe to my newsletter