Shobha Karndlaje

Untitled-2

BJP Karnataka

ಪ್ರಕೃತಿಯ ಮುಂದೆ ನಾವೆಷ್ಟು ಕುಬ್ಜರು!

ಜಗತ್ತಿನಲ್ಲಿ ಪ್ರಸ್ತುತ ಚರ್ಚೆಯಾಗುತ್ತಿರುವ ಬಿಸಿ ಬಿಸಿ ಸುದ್ದಿಯೆಂದರೆ ಪರಿಸರದ ತಾಪಮಾನ ಹೆಚ್ಚಳದ ಬಗ್ಗೆ. ಹಾಗೇನೇ 2012 ಕ್ಕೆ ಪ್ರಳಯ ಆಗುತ್ತಂತೆ ನಿಜನಾ? ಎಂಬ ಪ್ರಶ್ನೆಯನ್ನು ಎಲ್ಲರೂ ಕೇಳುತ್ತಿದ್ದಾರೆ. 2012 ಕ್ಕೆ ಅಥವಾ ಇನ್ಯಾವಾಗಲೋ ಪ್ರಳಯ ಆಗುತ್ತೋ ಇಲ್ಲವೋ ಗೊತ್ತಿಲ್ಲ ಆದರೆ ಸಧ್ಯ ಪ್ರಪಂಚದಲ್ಲಿ ನಡೆಯುತ್ತಿರುವ ಪರಿಸರ, ಪ್ರಕೃತಿಯ ಏರುಪೇರುಗಳು ಮಾನವನಲ್ಲಿ ಭಯವನ್ನು ನಿರ್ಮಾಣ ಮಾಡಿದೆ. ಕೆಲವು ದೇಶದಲ್ಲಿ ಭೂಕಂಪ, ಇನ್ನು ಕೆಲವು ಕಡೆ ಜ್ವಾಲಾಮುಖಿ ಮತ್ತೊಂದು ಕಡೆ ಅತಿಯಾದ ಮಳೆ, ನೀರು ಇನ್ನೊಂದು ಕಡೆ ಬರಗಾಲ, ಎಲ್ಲಾ ಕಡೆ ತಾಪಮಾನದ ಏರಿಕೆ ಹೀಗೇ ಒಂದಲ್ಲ ಒಂದು ಸಮಸ್ಯೆಯನ್ನು ಪ್ರಪಂಚದ ಎಲ್ಲಾ ದೇಶಗಳು ಎದುರಿಸುತ್ತಿವೆ. ಕಳೆದ ಒಂದು ತಿಂಗಳಲ್ಲಿ ಎರಡು ಬಾರಿ ಯುರೋಪಿನ ಬಹಳಷ್ಟು ದೇಶಗಳ ವಿಮಾನಗಳ ಹಾರಾಟ ಸ್ಥಗಿತಗೊಂಡವು. ಜ್ವಾಲಮುಖಿಯಿಂದ ಹೊರಟ ದಟ್ಟವಾದ ಹೊಗೆ ವಿಮಾನಗಳು ಅಸ್ತವ್ಯಸ್ತವಾಗುವುದಕ್ಕೆ ಕಾರಣ. ಹಿಂದೆಂದೂ ಇಂತಹ ಪರಿಸ್ಥಿತಿಯನ್ನು ಎದುರಿಸಿದ ಘಟನೆಗಳು ನೆನಪಿಗೆ ಬರುತ್ತಿಲ್ಲ. ಹಿಮದ ಬೆಟ್ಟಗಳು ಕರುಗುತ್ತಿವೆ, ಸಮುದ್ರದ ತಾಪಮಾನವು ಹೆಚ್ಚಾಗುತ್ತಿದೆ. ಭೂಮಿಯ ಬಿಸಿ ಏರಿಕೆಯಾಗುತ್ತಿದೆ. ಮುಂದಿನಾಗುತ್ತದೋ ಎಂಬ ಭಯ ಕಾಡುತ್ತಿದೆ. ಪ್ರಕೃತಿನೂ ಎಷ್ಟು ಅಂತ ಸಹಿಸಿಕೊಂಡೀತು? ಕೈಗಾರಿಕಾಕರಣ, ಉಧ್ಯಮಿಕರಣ, ತಂತ್ರಜ್ಞಾನ, ಅಭಿವೃದ್ದಿಯ ಹೆಸರಲ್ಲಿ ಭೂಮಿಯ ಒಡಲನ್ನೇ ಬಗೆದು ಖನಿಜ ಸಂಪತ್ತು ತೆಗೆದಿದ್ದೇವೆ. ಭೂಮಿ ಸಹಿಸಿಕೊಳ್ಳಲು ಆಗದಷ್ಟು ಕೈಗಾರಿಕೆಯ ತ್ಯಾಜ್ಯಗಳನ್ನು ಭೂಮಿಗೆ ಸುರಿದಿದ್ದೇವೆ. ಹಸಿರು ಕ್ರಾಂತಿಯ ಹೆಸರಲ್ಲಿ ಕೃಷಿ ಭೂಮಿಗೂ ರಸಗೊಬ್ಬರ, ಕ್ರೀಮಿನಾಶಕ ಹಾಕಿ ಮಲೀನಗೊಳಿಸಿದ್ದೇವೆ. ಮಣ್ಣು ವಿಷ, ನೀರು ವಿಷ, ಗಾಳಿ ವಿಷ, ನಾವು ಸೇವಿಸುವ ಇಲ್ಲವೂ ವಿಷಮಯವೇ ಆಗಿದೆ. ಮಣ್ಣು, ನೀರು, ಗಾಳಿ ಹಾಳಾದ ಪರಿಣಾಮ ನಾವು ತಿನ್ನುವ ಆಹಾರವೂ ವಿಷ. ತನ್ನ ಮೇಲೆ ಆಗುತ್ತಿರುವ ಆಘಾತಗಳನ್ನು ಪ್ರಕೃತಿ ಮಾತೆ ಎಷ್ಟು ದಿನ ಸಹಿಸಿಕೊಂದು ಸುಮ್ಮನಿದ್ದಾಳು? ಬಗ್ಗುವಷ್ಟು ಬಗ್ಗಿ ಒಂದು ದಿನ ಸೆಟೆದು ನಿಲ್ಲಲೇಬೇಕು. ಇದು ಮಾನವನ ಸಹಜ ಗುಣದಷ್ಟೇ ಪ್ರಕೃತಿ ಸಹಜ ಗುಣನೂ ಹೌದು. ಅದರ ಪರಿಣಾಮವೇ ನಾವು ಎದುರಿಸುತ್ತಿರುವ ಇಂದಿನ ಪರಿಸ್ಥಿತಿ.
ಪ್ರಕೃತಿ ನಮಗೆ ಇಲ್ಲವನ್ನೂ ಕೊಟ್ಟಿದೆ. ಫಲವತ್ತಾದ ಭೂಮಿ, ಪರಿಶುದ್ದವಾದ ನೀರು, ಗಾಳಿ, ಕತ್ತಲು, ಬೆಳಕು ಎಲ್ಲಾವೂ…. ಅದೇನು ಸೃಷ್ಟಿನೋ, ಎಷ್ಟೊಂದು ಬಗೆಯ ಹಣ್ಣುಗಳು, ಹೂವುಗಳು. ಒಂದು ಹಣ್ಣಿಗಿಂತ ಇನ್ನೊಂದಕ್ಕೆ ನೋಟ ಬೇರೆ, ರುಚಿ ಬೇರೆ, ಬಣ್ಣ ಬೇರೆ. ಹೂವೂ ಅಷ್ಟೇ ಅದರ ಬಣ್ಣ, ಆಕಾರ, ಸುವಾಸನೆ, ಅಬ್ಬ! ಸೃಷ್ಟಿಕರ್ತ ಅದೇಷ್ಟು ಬುದ್ದಿವಂತ. ಮನುಷ್ಯ ಸುಖ ಪಡಲು ಬೇಕಾದ ಎಲ್ಲವನ್ನು ಕೊಟ್ಟ. ತರಕಾರಿ, ಧಾನ್ಯಗಳು, ಎಲ್ಲಾವೂ ವಿಚಿತ್ರ ಸೃಷ್ಟಿ. ಭೂಮಿ ತನ್ನ ಒಡಲಲ್ಲಿ ಎಷ್ಟೊಂದು ರೀತಿಯ ಖನಿಜ ಸಂಪತ್ತನ್ನು ಅಡಗಿಸಿಕೊಂಡಿದೆ. ಒಂದೊಂದಕ್ಕೂ ಬೇರೆಯೆ ಆದ ಬಣ್ಣ, ಗಡುಸುತನ, ಉಪಯೋಗಗಳು. ಸ್ವಾರ್ಥಿ ಮಾನವ ದುರಾಸೆಯಿಂದ ಎಲ್ಲಾವನ್ನು ಒಮ್ಮೆಲೇ ಬಗೆದು ಅನುಭವಿಸಲು ಹೊರಟ. ಬೆಟ್ಟಗುಡ್ಡಗಳನ್ನು ಕರಗಿಸಿದ. ಮರಗಳನ್ನು ಕಡಿದು ನೀರನ್ನು ಬತ್ತಿಸಿದ. ಎಷ್ಟು ಉಪಯೋಗ ಮಾಡಬೇಕೋ ಅಷ್ಟಕ್ಕೆ ಸೀಮಿತವಾಗದೇ ಒಂದೇ ಬಾರಿ ಎಲ್ಲವನ್ನೂ ಬಾಚಿ ತಿನ್ನಲು ಹೊರಟ. ಚಿನ್ನದ ಮೊಟ್ಟಯಿಡುವ ಕೋಳಿ ಕತೆ ನಾವು ಕೇಳಿದ್ದೇವೆ. ಹಾಗೇನೇ ಪ್ರಕೃತಿಯ ಒಡಲಿಗೂ ಕೊಡಲಿ ಹಾಕಿದ. ಇದೆಲ್ಲದರ ಅಡ್ಡ ಪರಿಣಾಮವನ್ನು ಇಂದು ಎಲ್ಲಾರೂ ಒಟ್ಟು ಸೇರಿ ಅನುಭವಿಸುವ ಕಾಲ ಬಂದಿದೆ.
ಕೈಗಾರಿಕೆಗಳಿಂದ ಹೊರಸೂಸುವ ರಾಸಾಯನಿಕ ಹೊಗೆಯ ಪರಿಣಾಮ ಓಜೋನ್ ಪದರ ದುರ್ಬಲವಾಗಿದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಕಾಂಕ್ರಿಟ್ ಕಟ್ಟಡಗಳು, ಅದಕ್ಕೆ ಬಳಸಲಾಗುತ್ತಿರುವ ಗ್ಲಾಸ್‌ಗಳು, ಉಧ್ಯಮಗಳಿಂದ ಹೊರಬರುವ ಬಿಸಿ ಜ್ವಾಲೆಗಳು, ಹೊಗೆ, ಬೂದಿ ಇತ್ಯಾದಿಗಳು, ಕಡಿಮೆಯಾಗುತ್ತಿರುವ ಮರಗಿಡಗಳು ವಾತಾವರಣವನ್ನು ಇನ್ನಷ್ಟು ಬಿಸಿಗೊಳಿಸುತ್ತಿವೆ. ಬೆಂಗಳೂರಲ್ಲೇ ಹಿಂದೆ ಎಂದೂ ಕಾಣದ ತಾಪಮಾನದ ಏರಿಕೆಯಾಗಿದ್ದು ನಮ್ಮೆಲ್ಲರ ಅನುಭವಕ್ಕೆ ಬರುತ್ತಿದೆ. ಅಂತರ್ಜಲ ಮಟ್ಟ ಪೂರ್ಣ ಕುಸಿದಿದೆ. ಎಲ್ಲೆಲ್ಲೂ ನೀರಿಗೆ ಹಾಹಾಕಾರ ಅರಂಭವಾಗಿದೆ. ಮಳೆ ಬಂದರೆ ಒಂದೇ ಸಾರಿ ಆಕಾಶ ತೂತು ಆದಂತೆ ದೊಪ್ಪನೇ ಸುರಿಯುತ್ತೆ. ಇಲ್ಲ ಅಂದ್ರೆ ಇಲ್ಲವೇ ಇಲ್ಲ ಬರ ಅನ್ನುವ ಸ್ಥಿತಿ. ಒಟ್ಟಾರೆಯಾಗಿ ಪ್ರಕೃತಿ ಮಾತೆ ಮುನಿಸಿಕೊಂಡಿದ್ದಾಳೆ ಎನ್ನುವುದನ್ನು ಎಲ್ಲಾ ದೇಶದವರು ಅರ್ಥಮಾಡಿಕೊಂಡಿದ್ದಾರೆ.
‘Global Warming’ ಬಗ್ಗೆ ಸೆಮಿನಾರ್‌ಗಳು, ಬಿಸಿ ಬಿಸಿ ಚರ್ಚೆಗಳು ಪ್ರಪಂಚದೆಲ್ಲೆಡೆ ನಡೆಯುತ್ತಿವೆ. ಭೂಮಿಯನ್ನು ತಂಪು ಮಾಡಲು ನೂರಾರು ಮಿಲಿಯನ್ ಡಾಲರ್‌ಗಳನ್ನು ಖರ್ಚು ಮಾಡಲು ಅಭಿವೃದ್ಧಿಶೀಲ ದೇಶಗಳು ಮುಂದೆ ಬಂದಿವೆ. ’ಕೆಟ್ಟ ಮೇಲೆ ಬುದ್ದಿ ಬಂತು’ ಎಂಬ ಗಾದೆ ಮಾತಿನಂತೆ ಈಗಲಾದರೂ ಮುಂದುವರಿದ ಮತ್ತು ಮುಂದುವರಿಯುತ್ತಿರುವ ದೇಶಗಳಿಗೆ ಜ್ಞಾನೋದಯವಾಗಿರುವುದು ನಮ್ಮೆಲ್ಲರ ಪುಣ್ಯ. ಕೋಟ್ಯಾಂತರ ಜನರ ಕೈಗೆ ಉದ್ಯೋಗ ಕೊಡುವ ಸಣ್ಣ ಉದ್ದಿಮೆಗಳನ್ನು, ಗುಡಿ ಕೈಗಾರಿಕೆಗಳನ್ನು ಬಿಟ್ಟು ದೊಡ್ಡದರ ಕಡೆಗೆ ಕೈ ಚಾಚಿದೇವು. ವ್ಯವಹಾರ, ವ್ಯಾಪಾರ, ಲಾಭ ಮಾತ್ರ ಪ್ರಪಂಚದ ಕಣ್ಣಮುಂದಿತ್ತು. ದೊಡ್ಡ ಮೆಷಿನರಿಗಳು, ಕಡಿಮೆ ಜನ, ಹೆಚ್ಚು ಉತ್ಪಾದನೆ, ಹೆಚ್ಚು ಲಾಭ ಇವೇ ಕೈಗಾರಿಕೋದ್ಯಮಿಗಳ ಕಣ್ಣ ಮುಂದೆ ಇದ್ದ ಗುರಿ. ಬಹುರಾಷ್ಟ್ರೀಯ ಕಂಪೇನಿಗಳಂತೂ  ತನ್ನ ಕದಂಬ ಬಾಹುಗಳನ್ನು ಪ್ರಪಂಚದ ಎಲ್ಲಾ ದೇಶಗಳ ಕಡೆ ಚಾಚಿದವು. ಸಿಕ್ಕಿದಷ್ಟನ್ನು ಬಾಚಿದವು. ದೊಡ್ಡ ದೊಡ್ಡ ಗ್ರಾಹಕರನ್ನು ಹುಡುಕಿದವು. ಚಿಕ್ಕ ರಾಷ್ಟ್ರಗಳನ್ನು ತನ್ನ ಉತ್ಪನ್ನದ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡವು. ಅವರು ಮಾಡಿದ ತಪ್ಪಿಗೆ ಇಂದು ಎಲ್ಲರೂ ಶಿಕ್ಷೆ ಅನುಭವಿಸಬೇಕಾಗಿದೆ. ನಮ್ಮ ಭೂಮಿ, ನಮ್ಮ ನೀರು, ನಮ್ಮ ಗಾಳಿ, ನಮ್ಮ ಜನ. ಆದರೆ ಲಾಭ ಬಹುರಾಷ್ಟ್ರೀಯ ಕಂಪೆನಿಗಳಿಗೆ. ಬಹುರಾಷ್ಟ್ರೀಯ ಕಂಪೆನಿಗಳು ಶೇಕಡ 90 ರಷ್ಟು ಅಭಿವೃದ್ಧಿ ಹೊಂದಿದ ದೇಶಗದ್ದೆ. ನಮ್ಮ ನೆಲದಿಂದ ಲಾಭ ಪಡೆಯುವವರು ಅವರು, ನಮಗೇನು ಲಾಭ?  ಇದು ಬಡ ರಾಷ್ಟ್ರಗಳು ಕೇಳುವ ಪ್ರಶ್ನೆ. ಹಿಡಿಯಷ್ಟು ಅಧಿಕಾರಿಗಳು, ರಾಜಕಾರಣಿಗಳಿಗೆ ಕಿಕ್‌ಬ್ಯಾಕ್. ಜನರಿಗೆ ಮೈ ಬಗ್ಗಿಸದೇ ಕುಳಿತಲ್ಲಿಗೆ ವಸ್ತುಗಳ ಪೂರೈಕೆ. ಟೂತ್ ಪೆಸ್ಟ್, ಪೌಡರ್, ಸಾಬೂನು, ಶ್ಯಾಂಪ್ ಇದನ್ನು ನಮ್ಮ ಹಳ್ಳಿಯಲ್ಲಿ ನಾವೇ ಸುಲಭವಾಗಿ ತಯಾರಿಸಬಹುದು. ಆದರೆ ಅಷ್ಟು ವ್ಯವಧಾನ, ಶ್ರಮ ನಮಗೆ ಏಕೆ ಬೇಕು? ಪಕ್ಕದ ಅಂಗಡಿಗೆ ಹೋದರೆ ಟೂತ್ ಪೆಸ್ಟ್, ಸಾಬೂನು ಎಲ್ಲವೂ ಸಿಗುತ್ತದೆ. ಸ್ವಾತಂತ್ರ್ಯ ಬಂದ ಮೇಲಾದರೂ ಸ್ವಾವಲಂಬಿಗಳಾಗಬೇಕು ಎಂಬ ಕನಸು ಗಾಂಧೀಜಿಯವರದಾಗಿತ್ತು. ಆದರೆ ಸ್ವಾತಂತ್ರ್ಯ ಬಂದ ಮೇಲೆ ಸಣ್ಣ ಕೈಗಾರಿಕೆ, ಗುಡಿ ಕೈಗಾರಿಕೆ ಎಲ್ಲವನ್ನೂ ಮರೆತು ದೊಡ್ಡದರ ಬೆನ್ನು ಹತ್ತಿದೆವು. ಇದಕ್ಕಾಗಿ ಭಾರತದ ಬಜೆಟ್‌ನ ಸಾವಿರಾರು ಕೋಟಿ ಖರ್ಚು ಮಾಡಿದೆವು. ಪರಿಣಾಮ? 60 ವರ್ಷದ ನಂತರ ತಿರುಗಿ ನೋಡಿದರೆ ಇದರಲ್ಲಿ ಬಹುತೇಕ ಕಂಪೆನಿಗಳು ನಷ್ಟದಿಂದ ಮುಚ್ಚಿ ಹೋದವು. ಇದರ ಲಾಭ ಪಡೆದು ಬಹುರಾಷ್ಟ್ರೀಯ ಕಂಪೆನಿಗಳು ದೇಶಕ್ಕೆ ಕಾಲಿಟ್ಟವು. ಜನರು ತಾವು ಹಳ್ಳಿಯಲ್ಲೆ ದುಡಿಯಬಹುದು, ಸ್ವಾವಲಂಬಿಗಳಾಗಬಹುದು ಎಂಬುದನ್ನು ಮರೆತರು, ಜೊತೆಗೆ ಹೆಚ್ಚು ಗುಣಮಟ್ಟದ ಸ್ವದೇಶಿ ಉತ್ಪನ್ನಗಳನ್ನು ತಯಾರು ಮಾಡಿ ಬಳಸಬಹುದು ಎಂಬ ಮನೋಭಾವನೆ ಮಾಯವಾಯಿತು. ಎಲ್ಲಾದಕ್ಕೂ ಹೊರಗಡೆ ಕೈಚಾಚಲು ಕಲಿತೆವು.
ಪ್ರಕೃತಿ ನಾಶದ ಜೊತೆಗೆ ಮಾನಸಿಕ ವಿಕೃತಿಯು ಆರಂಭವಾಯಿತು. ಬಹು ರಾಷ್ಟ್ರೀಯ ಕಂಪನಿಗಳ ಉತ್ಪನ್ನಗಳೇ ಉತ್ಕೃಷ್ಟ ಎಂಬ ಭಾವನೆ ಬೆಳೆಯಿತು. ಈಗ ತಿದ್ದಿಕೊಳ್ಳಲಾರದ ಹಂತ ತಲುಪಿದ್ದೇವೆ. ನಮ್ಮ ಪರಿಸರ ಶುದ್ದೀಕರಣ ಹೇಗೆ? ಗೊತ್ತಾಗ್ತಿಲ್ಲ. ನಮ್ಮ ಪ್ರಕೃತಿಯನ್ನು ಉಳಿಸಿಕೊಳ್ಳುವುದು ಹೇಗೆ? ಪ್ರಕೃತಿ ವಿಕೋಪಗಳಿಗೆ ಪರಿಹಾರ ಏನು? ಇದು ಯಾವುದೂ ತಿಳಿಯದೇ ವಿಜ್ಞಾನಿಗಳು ಸೆಮಿನಾರ್ ಮೇಲೆ ಸೆಮಿನಾರ್ ಮಾಡ್ತಾನೇ ಇದ್ದಾರೆ. ಪ್ರಕೃತಿ ತನ್ನ ಒಡಲಿನ ಗುಟ್ಟನ್ನು ಇನ್ನೂ ಬಿಟ್ಟುಕೊಟ್ಟಿಲ್ಲ. ಯಾವಾಗ ಭೂಮಿ ಕಂಪಿಸುತ್ತದೆ ಎಂದು ತಿಳಿದರೂ ತಡೆಯುವ ಶಕ್ತಿ ಮಾನವನಿಗಿಲ್ಲ. ಪ್ರಕೃತಿ ಮುಂದೆ ನಾವೆಷ್ಟು ಕುಬ್ಜರು!
ಈಗಲಾದರೂ ಸ್ವಾರ್ಥ ಬಿಟ್ಟು ನಮ್ಮತನದ ಉಳಿವಿಕೆಯ ಬಗ್ಗೆ ಚಿಂತನೆ ಮಾಡೋಣ. ಪ್ರಕೃತಿಯನ್ನು ಎಷ್ಟು ಶೋಷಣೆ ಮಾಡಬಹುದೋ ಅಷ್ಟು. ಅದು ಸಹಿಸಿಕೊಳ್ಳುವಷ್ಟು ಮಾಡೋಣ. ಪ್ರಕೃತಿಯೊಂದಿಗೆ ಪರಸ್ಪರ ಪೂರಕವಾಗಿ ಸಾಗಿದರೆ ಮನುಕುಲಕ್ಕೆ ಒಳಿತು. ಇಲ್ಲದೇ ಹೋದರೆ ನಾಶ ಅನಿವಾರ್ಯ. ಇನ್ನಾದರೂ ಭೂಮಿಯ ಮಿತವಾದ ಹಿತ ಬಳಕೆ, ನೀರಿನ ಮಿತ ಬಳಕೆ, ಗಾಳಿಯ ಪರಿಶುದ್ಧತೆ, ಗಿಡಮರಗಳ ಉಳಿಸುವಿಕೆ, ಬೆಳಸುವಿಕೆಯ ಬಗ್ಗೆ ಚಿಂತಿಸೋಣ.

ಶೋಭಾ

Quotes

You have to grow from theinside out. None can teach you, none can make you spiritual. There is noother teacher but your own soul.

— Swami Vivekananda

Newsletter

Get latest updates of my blog, news, media watch in your email inbox. subscribe to my newsletter