Shobha Karndlaje

Untitled-2

BJP Karnataka

ನೆರೆ ಬಂದು ಹೋದ ಮೇಲೆ

ಶತಮಾನಗಳಿಂದ ನಿರಂತರವಾಗಿ ಭೂಕಂಪಕ್ಕೆ, ಸುನಾಮಿಗೆ ತನ್ನನ್ನು ತಾನು ಒಡ್ಡಿಕೊಂಡು, ಅದನ್ನೇ ರೂಡಿಸಿಕೊಂಡು ಬೆಳೆದು ನಿಂತಿರುವ ದೇಶ ಜಪಾನ್.  ಎರಡನೇ ಮಹಾಯುದ್ಧದಲ್ಲಿ ಜಪಾನ್‌ನ ಹಿರೋಶಿಮ ಮತ್ತು ನಾಗಸಾಕಿ  ಪ್ರಾಂತ್ಯಗಳು ಬಾಂಬ್ ದಾಳಿಗೆ ಸಂಪೂರ್ಣವಾಗಿ ನಲುಗಿ ಹೋಗಿದ್ದವು. ಎರಡು ನಗರಗಳು ಸರ್ವನಾಶವಾದವು. ಇದು ಮಾನವ ಪ್ರೇರಿತ ವಿನಾಶ. ಜಪಾನ್ ಇದನ್ನೇ ಸವಾಲಾಗಿ ಸ್ವೀಕರಿಸಿತ್ತು.  ಜನ ನಿರ್ಧಾರ ಮಾಡಿದ್ರು ಈ ದೇಶ ಮತ್ತೆ ಕಟ್ಟುತ್ತೇವೆ. “ಕಟ್ಟುವೆವು ಹೊಸ ನಾಡೊಂದನು, ರಸದ ಬೀಡೊಂದನು” ಎಂಬಂತೆ ಶ್ರಮ ಪಟ್ಟರು, ಹಗಲಿರುಳು ದುಡಿದರು. ಸ್ವಂತ ಪರಿಶ್ರಮದಿಂದ ಇವತ್ತು ಜಗತ್ತಿಗೆ ಸವಾಲೆಸೆಯುವ ರೀತಿಯಲ್ಲಿ ಬೆಳೆದು ನಿಂತಿದ್ದಾರೆ.  ಪ್ರಪಂಚದ ಅತ್ಯಂತ ಹೆಚ್ಚು ಜಿಡಿಪಿ ಹೊಂದಿದ ದೇಶ ಜಪಾನ್, ಈ ಸಂದಿಗ್ಧತೆಯ ಸ್ಥಿತಿಯಲ್ಲಿ ಜಪಾನಿನ ಕೆಚ್ಚನ್ನು ಪರಿಶ್ರಮವನ್ನು ನಾವು ಸವಾಲಾಗಿ ಸ್ವೀಕರಿಸಬಹುದೇ? ಉತ್ತರ ಕರ್ನಾಟಕದ ಬಹುತೇಕ ಪ್ರದೇಶ ಸರ್ವನಾಶವಾಗಿದೆ. ಕಣ್ಣಾರೆ ಕಂಡಾಗ ಮನಕಲುಕುವಂತಹ ಆಸ್ತಿಕರಿಗೆ ದೇವರ ಇರುವಿಕೆಯ ಬಗ್ಗೆ, ಅವನ ನಿರ್ಧಾರಗಳ ಬಗ್ಗೆನೇ ಸಂಶಯ ತರುವಂತಹ ಭೀಕರತೆ ಅಲ್ಲಿದೆ. ಊರು ಇತ್ತು ಅನ್ನುವ ಕುರುಹುಗಳೇ ಇಲ್ಲದಂತೆ ಮಾಯವಾಗಿದೆ.  ಜನ ತಾವು ಸಾಕಿದ, ಪ್ರೀತಿಸಿದ ಜಾನುವಾರುಗಳನ್ನು ಅಲ್ಲೇ ಬಿಟ್ಟು ಓಡಿಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ, ಮನೆಗಳು ಕುಸಿದು ಹೋಗಿವೆ, ತಾವು ವರ್ಷಕ್ಕೆ ಕೂಡಿಸಿಟ್ಟ ಜೋಳ, ಅಕ್ಕಿ, ಬೇಳೆ ಸಂಪೂರ್ಣವಾಗಿ ನೀರಲ್ಲಿ ತೋಯ್ದಿದೆ.  4-5 ದಿನ ನೀರು ನಿಂತ ಕಾರಣ ಹೋಗಲಾಗದೆ ಆಹಾರ ಪದಾರ್ಥಗಳು ಕೊಳೆತು ಹೋಗಿವೆ.  ಪ್ರಾಣಕ್ಕೆ ಅಪಾಯ ಬಂದಾಗ ಬಟ್ಟೆ ಬರೆಗಳನ್ನು ತಾವು ಕಷ್ಟಪಟ್ಟು ಸಂಪಾದಿಸಿದ ತಮಗೆ ಪ್ರಿಯವಾದ ವಸ್ತುಗಳನ್ನು ತರಲು ಆಗಿಲ್ಲ. ಅವೆಲ್ಲಾ ಮಣ್ಣಲ್ಲಿ ಮಣ್ಣಾಗಿ  ಹೋಗಿವೆ.  ಬಡವರು ಶ್ರೀಮಂತರು ಅನ್ನುವ ಭೇದವಿಲ್ಲದೆ ನಿರಾಶ್ರಿತರ ಕೇಂದ್ರದಲ್ಲಿ ವಾಸ ಮಾಡುವ ಸ್ಥಿತಿ ಅದರಲ್ಲೂ ಮಧ್ಯಮ ವರ್ಗಕ್ಕಿಂತ ಮೇಲ್ಪಟ್ಟ ರೈತರ ಸ್ಥಿತಿ ದೇವರಿಗೇ ಪ್ರೀತಿ. ಈ ವರ್ಗದ ರೈತರಿಗೆ ಕೈಯೊಡ್ಡಿ ಕೇಳಿ ಆಭ್ಯಾಸವಿಲ್ಲ. ಈಗ ಕೇಳದೇ ನಿರ್ವಾಹವಿಲ್ಲ. ಬದುಕಿದ್ದರೂ ಸಾಯುತ್ತಿರುವ  ಅನುಭವ, ಮುಜುಗರ  ಹತಾಶೆಯ ಮಧ್ಯ  ಬಾಳಲೇ ಬೇಕಾದ ಸ್ಥಿತಿ.  ಇವರ ಈ ಪರಿಸ್ಥಿತಿ ಕಂಡು ಮನಸ್ಸು ಮರುಗುತ್ತದೆ. ದುಃಖ ಉಮ್ಮಳಿಸುತ್ತದೆ. ಇದರ ಮಧ್ಯದಲ್ಲೂ ದುಷ್ಕರ್ಮಿಗಳು ಪ್ರತ್ಯಕ್ಷರಾಗುತ್ತಾರೆ. ಬೆಲೆಬಾಳುವ ವಸ್ತುಗಳನ್ನು ಬಿಟ್ಟು ಮನೆಗೆ ಕೀಲಿ ಹಾಕಿ ಓಡಿ  ಬಂದ ಇವರ ಮನೆಗಳಿಗೆ ನುಗ್ಗಿ ಕಳ್ಳತನ ನಡೆಯುತ್ತಿವೆ, ಹೆಣ ಉರಿಯುವ ಬೆಂಕಿಯಲ್ಲಿ ಗಳ ತೆಗೆಯುವ ಜನರ ಈ ದುಷ್ಕೃತ್ಯಕ್ಕೆ  ಮನಸ್ಸು ಇನ್ನಷ್ಟು ಭಾರವಾಗುತ್ತದೆ. ಮಾನವಿಯತೆಯೇ ಮಾಯವಾಗಿದೆಯೇನೋ ಎಂಬ ಭಾವನೆ ಕಾಡುತ್ತದೆ. ಪ್ರಕೃತಿಯ ಮುಂದೆ ಮನುಜರೆಷ್ಟು ಕುಬ್ಜರು ಎನ್ನುವುದು ಭೀಕರ, ಭಯಾನಕ ಪ್ರವಾಹವನ್ನು ನೋಡುತ್ತಿರುವಾಗ ಅನ್ನಿಸಿತ್ತು.  ಆಕಾಶದಿಂದ ನೋಡಿದಾಗ ಮಂತ್ರಾಲಯ, ರಾಯಚೂರಿನ ಹಳ್ಳಿಗಳು ಗುರುತೇ ಸಿಗದಷ್ಟು ಮುಳುಗಿದ್ದವು. ತಮಿಳುನಾಡಿನ ನಾಗಪಟ್ಟಣಂಗೆ ಸುನಾಮಿ ಅಪ್ಪಳಿಸಿದ ಮರು ದಿನ ನಾನು ಹೋಗಿದ್ದೆ.  ಸುನಾಮಿಯ ಬೃಹತ್ ಅಲೆಗಳು ಬಿಟ್ಟುಹೋದ ಕುರುಹುಗಳು ಮಾತ್ರ ಅಲ್ಲಿದ್ದವು.  ಸಮುದ್ರ ತನ್ನ ಪಾಡಿಗೆ ತಾನು ಏನು ನಡೆದೇ ಇಲ್ಲವೆಂಬಂತೆ ಪ್ರಶಾಂತವಾಗಿತ್ತು.  ಆ ನೀರು ಅಪ್ಪಳಿಸಿದ 4-5 ಕಿ.ಮೀಟರ್ ಪ್ರದೇಶದ ತುಂಬ ಹೆಣಗಳ ರಾಶಿ.  ಗುಡಿಸಲುಗಳ ರಾಶಿ ರಾಶಿಯೇ ಹರಡಿತ್ತು.  ನೆಲದಲ್ಲಿ ಸಾಸಿವೆ ಚೆಲ್ಲಿದಂತೆ ಸಮುದ್ರ ರಾಜ ಭೂಮಿಯಲ್ಲಿ ಹೆಣಗಳನ್ನು ಚೆಲ್ಲಿಹೋಗಿದ್ದ. ಎಲ್ಲಿ ನೋಡಿದರಲ್ಲಿ ಬರೀ ಕೆಂಪುನೀರು.  ಇದು ಮಂತ್ರಾಲಯ ಎಂದು ಗುರುತಿಸಲು ನಾಲ್ಕೈದು ಸುತ್ತು ಹಾರಾಡಿ ಖಾತ್ರಿ ಮಾಡಿಕೊಳ್ಳಬೇಕಾದ ಸ್ಥಿತಿ. ತೇಲಿಹೋಗುತ್ತಿದ್ದ ವಾಹನಗಳು, ಮರಗಿಡಗಳು, ಇನ್ನೇನು ನೀರಿನಲ್ಲಿ ಪೂರ್ಣ ಮುಳುಗುತ್ತಿದೆ ಅನ್ನುವ  ಸ್ಥಿತಿಯಲ್ಲಿದ್ದ ಬಸ್ಸಿನಿಂದ, ಚಾಚಿದ ಕೈಗಳು ಅವರನ್ನು ಮೇಲೆತ್ತಿದಾಗ ಅವರ ಕಣ್ಣಲ್ಲಿ ಕಂಡ ಕೃತಜ್ಞತಾ ಭಾವ ಮರೆಯಲಾಗದ ಅನುಭವ.  ಮುಖ್ಯಮಂತ್ರಿಗಳಿಂದ ಸ್ವಾಮೀಜಿಯವರನ್ನು, ಸುಬ್ಬಣ್ಣರವರನ್ನು ರಕ್ಷಿಸಬೇಕೆನ್ನುವ ಸೂಚನೆ ಮನಸ್ಸಲ್ಲಿತ್ತು.   ಆದರೆ ಹೇಗೆ? ಎನ್ನುವ ಪ್ರಶ್ನೆ. ನಮ್ಮಿಂದ ಮೊದಲು ಹೋಗಿದ್ದ ಹೆಲಿಕಾಪ್ಟರ್‌ಗಳು ‘ಆಗಲ್ಲ’ ಎಂದು ವಾಪಸ್ಸಾಗಿದ್ದವು.  ಹೆಲಿಕಾಪ್ಟರ್‌ನ ಬಾಲ ದೇವಸ್ಥಾನದ ಗೋಪುರಕ್ಕೆ ತಾಗಿ ಎಲ್ಲಿ ಅನಾಹುತವಾಗುತ್ತದೋ ಎಂಬ ಭಯ ಯೋಧರದು.  ಸ್ವಾಮೀಜಿಯವರನ್ನು ಸುರಕ್ಷಿತವಾಗಿ ಮೇಲೆತ್ತಿ ರಾಯಚೂರಿನಲ್ಲಿ ಜನರನ್ನು ಕಾಪಾಡಬೇಕಾದ ಜವಾಬ್ದಾರಿಯನ್ನು ಹೊತ್ತು ಹೆಲಿಕಾಪ್ಟರ್ ರಾಯಚೂರಿಗೆ ಪ್ರಯಾಣ ಬೆಳೆಸಿತ್ತು.

ನೆರೆಹಾವಳಿಯ ಭೀಕರತೆಯನ್ನು ಕಂಡ ಮೇಲೆ ಹಲವಾರು ಪ್ರಶ್ನೆಗಳು ಮನಸ್ಸಲ್ಲೇ ಕಾಡಲಾರಂಭಿಸಿವೆ. ಮೊದಲನೆಯದಾಗಿ ನಮ್ಮ ಜನ ತಮ್ಮ ಮನೆಗಳನ್ನು ಇನ್ನಷ್ಟು ವೈಜ್ಞಾನಿಕವಾಗಿ ಗಟ್ಟಿಯಾಗಿ ಕಟ್ಟಿಕೊಳ್ಳಲು ಸಾಧ್ಯವಿಲ್ಲವೆ? ಕರಾವಳಿಯ ಜನಕ್ಕೆ ಮಳೆ, ಬಿಸಿಲು ಎರಡೂ ಅನುಭವವಿದೆ. ಉಡುಪಿ, ಉತ್ತರಕನ್ನಡದಂತಹ ಜಿಲ್ಲೆಗಳಲ್ಲಿ ಭೀಕರ ಎಣಿಸುವಷ್ಟು ಮಳೆ ಬರುತ್ತದೆ.

ಆದರೆ ಮನೆಗೆ ನೀರು ನುಗ್ಗಿ ನಾಲ್ಕು ದಿನ ಇದ್ರು ಮನೆ ಕುಸಿಯುವುದಿಲ್ಲ, ಕಾರಣ ನೂರಾರು ವರ್ಷಗಳ ಹಳೆಯದಾದ ಮನೆಗೂ ಮನೆಗಿಂತ ಗಟ್ಟಿಯಾದ ಅಡಿಪಾಯ ಇರುತ್ತದೆ.  ಅಲ್ಲಿನ ಜನರು ಇವತ್ತಿಗೂ ಮಣ್ಣಿನಲ್ಲಿ ಮನೆ ಕಟ್ಟುತ್ತಾರೆ.  ಆದರೆ ಈ ಪ್ರಮಾಣದಲ್ಲಿ ಬಿದ್ದು ಹೋಗಲ್ಲ.  ಈ ಪ್ರಮಾಣದ ಮಳೆನೂ ಬಂದಿಲ್ಲವಾದರೂ ಮಾನಸಿಕವಾಗಿ ಮಳೆಗೆ ತಯಾರಾಗಿಯೇ ಮನೆ ಕಟ್ಟುತ್ತಾರೆ.  ಉತ್ತರ ಕರ್ನಾಟಕದ ಬಹುಸಂಖ್ಯೆಯ ಮನೆಗಳಿಗೆ ಅಡಿಪಾಯವೇ ಇಲ್ಲ !  ಹೆಚ್ಚಿನ ಮನೆಗಳನ್ನು ಮಣ್ಣು ಕಲ್ಲುಗಳ ಗೋಡೆ, ಗೋಡೆಗಿಂತ ಭಾರವಾದ ಮಣ್ಣಿನ ಮೇಲ್ಚಾವಣಿ ಮಳೆ ಬಂದಾಗ ಎರಡು ಒದ್ದೆಯಾಗುತ್ತವೆ ಭಾರ ತಾಳಲಾಗದೆ ಕುಸಿಯುತ್ತವೆ.  ಮನೆ ಕುಸಿತದಿಂದಲೇ ಸಾವಿನ ಸಂಖ್ಯೆಯು ಜಾಸ್ತಿಯಾಗುತ್ತದೆ.  ಅಲ್ಲಿನ ಜನಕ್ಕೆ ಈ ದುರ್ಘಟನೆಯ ನಂತರವಾದರೂ ಭದ್ರತೆಯ, ಗಟ್ಟಿ ಅಡಿಪಾಯದ, ಹಗುರವಾದ ಮನೆ ಕಟ್ಟುವುದನ್ನು ತಿಳಿಸಿ ಕೊಡಬೇಕಾದ ಜವಾಬ್ದಾರಿ ನಮ್ಮೆಲ್ಲರದು.  ಎರಡನೆಯದಾಗಿ ಮನುಷ್ಯನಿಗೆ ಎಷ್ಟೇ ಇದ್ದರೂ ದುರಾಸೆ,  ತನ್ನ ಜಮೀನಿನ ಪಕ್ಕದಲ್ಲೇ ಹರಿದು ಹೋಗುತ್ತಿರುವ ಹಳ್ಳ, ಕೊಳ್ಳ, ನಾಲಾ ಎಲ್ಲದರಲ್ಲೂ ನೀರು ಹೇರಳವಾಗಿದೆ  ಎನ್ನುವ ಕಾರಣಕ್ಕೆ ಒತ್ತುವರಿ ಮಾಡಿ ಬೆಳೆ ಬೆಳೆಯುವ ಪ್ರವೃತ್ತಿ.  ಉತ್ತರ ಕರ್ನಾಟಕದಲ್ಲಿ ಮಾಮೂಲಿಯಂತೆ ಸಣ್ಣ ಮಳೆ ಬಂದಾಗ ಇದು ಪರವಾಗಿಲ್ಲ.  ಆದರೆ ಇಂತಹ ದೊಡ್ಡ ಮಳೆಯನ್ನು ತಡೆದುಕೊಳ್ಳುವ ಶಕ್ತಿ ಹಳ್ಳ ಕೊಳ್ಳಕ್ಕಿಲ್ಲ ಇರುವ ಪ್ರದೇಶದಲ್ಲೂ ಹೂಳು ತುಂಬಿದೆ.  ವಿಶಾಲವಾಗಿ ಹರಿದರೆ ಗದ್ದೆ ತೋಟದಲ್ಲೇ ಹರಿಯಬೇಕು, ತನಗೆ ಹರಿಯಲು ಜಾಗ ಸಾಲದೆ ಹೋದಾಗ ನದಿ, ಸಣ್ಣ ಸಣ್ಣ ಹಳ್ಳ ತೋಡುಗಳು ತಮ್ಮ ಪಾತ್ರವನ್ನೇ  ಇಲ್ಲಿ ಬದಲಾಯಿಸಿವೆ.  ಮನಸ್ಸೋ ಇಚ್ಛೆ ಹರಿದಿವೆ. ಹೋಗ್ತಾ ಸಿಕ್ಕ ಸಿಕ್ಕದನ್ನೆಲ್ಲಾ ಕೊಚ್ಚಿಕೊಂಡು ಹೋಗಿವೆ.  ನಾನು ಬೇಕಾದಲ್ಲಿ ಹರಿಯುತ್ತೇನೆ. ಏನು ಮಾಡುತ್ತೀಯೋ ಮಾಡಿಕೋ ಎಂಬ ಸವಾಲಿನಂತಿವೆ ಹಲವಾರು ಪ್ರದೇಶಗಳು.

ಮೂರನೆಯದಾಗಿ ಎಲ್ಲಾ ರಾಜ್ಯಗಳ ಜಲ ನಿರ್ವಹಣೆ ಇನ್ನಷ್ಟು ವೈಜ್ಞಾನಿಕ ಆಗಬೇಕು.  ಮೊದಲ ಮಳೆಯಲ್ಲಿ ಸಾಕಷ್ಟು ನೀರು ಬಂತೆಂದು ಜಲಾಶಯ ಪೂರ್ತಿ ತುಂಬಿಸಿಟ್ಟುಕೊಂಡರೆ ಕೊನೆಯಲ್ಲಿ ಬರಬಹುದಾದ ಇಂತಹ ಮಳೆಯ ನೀರನ್ನು ಎಲ್ಲಿ ಹಿಡಿದಿಟ್ಟುಕೊಳ್ಳಬೇಕು? ಎಲ್ಲಾ ರಾಜ್ಯಗಳ ಸ್ಥಿತಿನೂ ಇದೇ ಆಗಿದೆ  ಮಹಾರಾಷ್ಟ್ರದಲ್ಲಿ ಮಳೆ ಜಾಸ್ತಿಯಾದಾಗ ಕೊಹಿನಾದಿಂದ ದುತ್ತನೇ ನೀರುಬಿಡುವುದು; ಅಲ್ಲಿಂದ ಬಂದ ಮತ್ತು ಇಲ್ಲಿ ಬಿದ್ದ ಮಳೆ ಜಾಸ್ತಿಯಾದಾಗ ಆಲಮಟ್ಟಿ, ನಾರಾಯಣಪುರದಿಂದ ನೀರು ಬಿಡುವುದು. ಇದನ್ನೇ ಆಂಧ್ರ, ಶ್ರೀಶೈಲಂನಲ್ಲಿ ಮಾಡುವುದರಿಂದ ಊಹಿಸಲಾರದಷ್ಟು ಆನಾಹುತಗಳು ಪದೇ ಪದೇ ಮರುಕಳುಸುತ್ತಿವೆ.  ಇದು ಬೇರೆ ರಾಜ್ಯಗಳಲ್ಲೂ ಆಗುತ್ತಿವೆ. ಆಣೆಕಟ್ಟೆಗಳಲ್ಲಿ ಕಡ್ಡಾಯವಾಗಿ ಶೇ. 10% ರಷ್ಟು ಖಾಲಿ ಇಟ್ಟುಕೊಂಡು  ಶೇ. 90% ರಷ್ಟು ನೀರಾವರಿಯನ್ನು ಸರಿದೂಗಬಲ್ಲವೇ ಎಂಬ ಧೃಡ ನಿರ್ಧಾರ ಮಾಡಬೇಕು. ಆಗ ಕೊನೆದಿನಗಳಲ್ಲಿ ಬರುವ ಇಂತಹ ಆಕಾಲಿಕ ಮಳೆಯನ್ನು ಹಿಡಿದಿಟ್ಟು ಕೊಳ್ಳುವ ಶಕ್ತಿ ನಮ್ಮ ಜಲಾಶಯಗಳಿಗೆ ಬರುತ್ತವೆ  ಮತ್ತು ಹಾನಿ ಕಡಿಮೆಯಾಗುತ್ತದೆ.  ಅದರ ಜೊತೆಗೆ ಬೃಹತ್ ಯೋಜನೆಗೆ ತಕ್ಕಂತೆ (ಈeiಟಜ ಛಿಚಿಟಿeಟ) ಹೊಲದ ಕಾಲುವೆ ಮಾಡಿ ಜಮೀನಿಗೆ  ನೀರುಣಿಸುವ ಕೆಲಸಕ್ಕೆ ಇನ್ನಷ್ಟು ವೇಗ ಸಿಗಬೇಕಿದೆ.  ಜಲಾಶಯದಲ್ಲಿ ನೀರಿದ್ದರೂ ಆ ನೀರು ಬೇಕಾದಾಗ ಹೊಲಕ್ಕೆ ತಲುಪಿಲ್ಲ ಅಂದರೆ ಯೋಜನೆಯನ್ನು ರಾಷ್ಟ್ರೀಯ ನಷ್ಟವೆಂದೇ ಪರಿಗಣಿಸಲಾಗುತ್ತದೆ. ಅದರ ಜೊತೆಗೆ ನಮ್ಮ ಜಲಾಶಯಗಳಲ್ಲಿ ಯೋಜನೆ ಮಾಡಿದಷ್ಟು ನೀರು ಹಿಡಿದಿಟ್ಟುಕೊಳ್ಳುವ ಶಕ್ತಿ ಇಲ್ಲ.  ಸಾಕಷ್ಟು ಹೂಳು ತುಂಬಿ ಕೊಂಡಿದೆ.  ವೈಜ್ಞಾನಿಕವಾಗಿ ಹೂಳು ತೆಗೆಯುವುದು ಸಾಧ್ಯವೇ? ಇದೊಂದು ದೊಡ್ಡ ಪ್ರಶ್ನೆ.  ಆದರೆ ಹರಿಯುವ ನೀರನ್ನು ತುಂಬಿಕೊಳ್ಳಲು ಪರ್ಯಾಯವಾಗಿ ಚಿಕ್ಕ ಚಿಕ್ಕ ಅಣೆಕಟ್ಟುಗಳನ್ನು  ಮಾಡಿ ಅಲ್ಲಿಗೆ ನೀರು ಹರಿಸುವ ಬಗ್ಗೆ ಯೋಜನೆ ನಡೆಯಬೇಕು.  ಕೆರೆಗೆಳ ನಿರ್ಮಾಣ ಆಣೆ ಕಟ್ಟುಗಳ ನಿರ್ಮಾಣದಿಂದ ಸಮುದ್ರಕ್ಕೆ ಹರಿಯುವ ನೀರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡಬಹುದು.  ಕೇಂದ್ರ ಮತ್ತು ರಾಜ್ಯ ನೀರಿನ ವೈಜ್ಞಾನಿಕ ನಿರ್ವಹಣೆ ಮತ್ತು ಸದ್ಬಳಕೆ ಕಡೆ ಹೆಚ್ಚಿನ ಗಮನ ಕೊಡಬೇಕಾದ ಅಗತ್ಯ ಎಂದಿಗಿಂತ ಇಂತಹ ಅನಾಹುತದ ಸಂದರ್ಭದಲ್ಲಿ ಎದ್ದು ಕಾಣುತ್ತದೆ. ಕಳೆದ 25 ವರ್ಷಗಳಲ್ಲಿ ಅಣೆಕಟ್ಟು ಯೋಜನೆಯಲ್ಲಿ ಸ್ಥಳಾಂತರ ಆಗಬೇಕಾದ ಹಳ್ಳಿಗಳು ಇನ್ನು ಸ್ಥಳಾಂತರವಾಗಿಲ್ಲ.  ಪರಿಹಾರ ಪಡೆದ ಹಳ್ಳಿಗಳು ಇನ್ನು ಅಲ್ಲೇ ತಳವೂರಿವೆ.

ಕಡ್ಡಾಯವಾಗಿ ಇವುಗಳನ್ನು ಸ್ಥಳಾಂತರ ಮಾಡಬೇಕಾದ ಜವಾಬ್ದಾರಿ ಸರ್ಕಾರಗಳದ್ದಾಗಿತ್ತು.  ಊರ ಜನರ ಮೊಂಡುತನವು ಇವತ್ತಿನ ಈ ಪ್ರಮಾಣದ ಅನಾಹುತಕ್ಕೆ ಕಾರಣವಾಗಿವೆ.

ಇಡೀ ವರ್ಷದ ಶೇ. 70% ರಷ್ಟು ಮಳೆ 5 ದಿನಗಳಲ್ಲಿ ಸುರಿದು ಹೋಗಿವೆ 24 ಘಂಟೆಗಳಲ್ಲಿ 377 ಮಿಲಿ ಮೀಟರ್ ಮಳೆ ಸುರಿದು ನೂರು ವರ್ಷಗಳಲ್ಲಿ ಕಾಣದ ದಾಖಲೆ ನಿರ್ಮಿಸಿದೆ.  227 ಜನ ಬಂಧುಗಳನ್ನು ಕಳೆದುಕೊಂಡಿದ್ದೇವೆ.  5 ಲಕ್ಷದ 26 ಸಾವಿರ ಮನೆಗಳು ನಾಶವಾಗಿವೆ. 1.8 ಕೋಟಿ ಜನ ತೊಂದರೆ ಪಡುತ್ತಿದ್ದಾರೆ. 25 ಲಕ್ಷ ಹೆಕ್ಟೇರು ಕೃಷಿ ಜಮೀನು ನಾಶವಾಗಿದೆ.  ಬಾಯಿ ಬಾರದ ಮೂಕ ಪ್ರಾಣಿಗಳು ಲೆಕ್ಕವಿಲ್ಲದಷ್ಟು ತೇಲಿ ಹೋಗಿವೆ. ಊರಿಗೆ ಊರೇ ಬಿದ್ದುಹೋಗಿವೆ.  ಶತಮಾನಗಳಲ್ಲೇ ಕರ್ನಾಟಕ ಕಾಣದಂತಹ ಈ ಭೀಕರತೆಯನ್ನು ಕಂಡು ಮಮ್ಮಲ ಮರುಗಿದ ಜನ ಸಹಾಯಹಸ್ತವನ್ನು ನೀಡುತ್ತಿದ್ದಾರೆ.  ನೊಂದ ಜನರ ಬದುಕಿಗೆ ನೆರವಾಗುತ್ತಿದ್ದಾರೆ.  ಕೇಂದ್ರ ಸರ್ಕಾರದ ಸಹಾಯ ಹಸ್ತ ಸಿಕ್ಕಿದೆ.  ಪ್ರಧಾನಿಯವರು ಬಹಳ ತಾಳ್ಮೆಯಿಂದ ಸರ್ಕಾರದ ಮನವಿಯನ್ನು  ಆಲಿಸಿದ್ದಾರೆ.  ಒಂದು ಸಾವಿರ ಕೋಟಿ ರೂಪಾಯಿಗಳ  ಪರಿಹಾರ ಭರವಸೆಯನ್ನು ನೀಡಿದ್ದಾರೆ.  ನಮಗಾದ ನಷ್ಟಕ್ಕೆ ಇದು ಕಡಿಮೆನೇ. ಆರಂಭಿಕ ಮಾಹಿತಿಯಂತೆ ಸುಮಾರು ಹದಿನಾರುವರೆ (16.5) ಸಾವಿರ ಕೋಟಿ ನಷ್ಟವಾಗಿದೆ.  ಇನ್ನು ಪೂರ್ಣ ವರದಿ ಬಂದ ಮೇಲೆ 25 ಸಾವಿರ ಕೋಟಿ ದಾಟಿದರೂ ಆಶ್ಚರ್ಯವಿಲ್ಲ. ಭೌತಿಕವಾಗಿ ನಷ್ಟದ ಲೆಕ್ಕ ಹಾಕಲಾಗುತ್ತಿದೆಯಾದರೂ ನೈತಿಕವಾಗಿ, ಮಾನಸಿಕವಾಗಿ ಉತ್ತರ ಕರ್ನಾಟಕದ ಜನ ಕುಗ್ಗಿ ಹೋಗಿದ್ದಾರೆ.  ರಾಜ್ಯಕ್ಕೆ, ದೇಶಕ್ಕೆ ಅನ್ನ ಕೊಡುತ್ತಿದ್ದ ರೈತ ಕಂಗಾಲಾಗಿದ್ದಾನೆ. ದೇಶದ ಪ್ರಧಾನಿಯನ್ನು ಚಿನ್ನದಲ್ಲಿ ತೂಗಿದ ಜನ ಇವತ್ತು ಬರಿ ಕೈಯಲ್ಲಿ ಬಟ್ಟೆ, ಅನ್ನ, ಸೂರು ಇಲ್ಲದೆ ಕೈಯೊಡ್ಡುವ ಪರಿಸ್ಥಿತಿ ನಿರ್ಮಾಣವಾಗಿದೆ.  ಈ ಜನರ ಬಗ್ಗೆ ಪಕ್ಷ ರಾಜಕಾರಣ ಬಿಟ್ಟು ಯೋಚನೆ, ಯೋಜನೆ ನಿರ್ಧಾರಗಳನ್ನು ಮಾಡಬೇಕೆಂಬುದು ಜನಾಭಿಪ್ರಾಯವಾಗಿದೆ.  ಪಕ್ಕದ ಮನೆ ಮತ್ತು ನಮ್ಮ ಮನೆಯನ್ನು ತುಲನೆ ಮಾಡಿಕೊಳ್ಳುವುದು ಮನುಷ್ಯನ ಸಹಜ ಗುಣ, ಸರಿ ಅಲ್ಲ ಎಂದೆಣಿಸಿದರೂ  ತುಲನೆ ನಡೆದೇ ನಡೆಯುತ್ತದೆ.  ಹಾಗೇನೆ ಆಂಧ್ರಕ್ಕೂ ನಮಗೂ ತುಲನೆ ಬಹಳ ವಿಚಾರಗಳಲ್ಲಿ ನಡೆಯುತ್ತಿದೆ.  ನೆರೆಯಲ್ಲೂ ಸಹ ನಮ್ಮಲ್ಲಿ ನೆರೆಗೊಳಗಾದ ಜಿಲ್ಲೆಗಳು 15. ಆಂಧ್ರದಲ್ಲಿ  5. ನಮ್ಮಲ್ಲಿ ನೆರೆಗೊಳಗಾದ ಹಳ್ಳಿಗಳು 4292. ಆಂಧ್ರದಲ್ಲಿ 498. ಇಲ್ಲಿ ತೊಂದರೆಗೊಳಗಾದ  ಜನ 1.8 ಕೋಟಿ ಅಲ್ಲಿ ಕೇವಲ 15 ಲಕ್ಷ . ಇಲ್ಲಿ ಸತ್ತಿರುವವರು 227. ಅಲ್ಲಿ 49. ಕರ್ನಾಟಕದಲ್ಲಿ ಮನೆಗಳು ಕುಸಿದಿದ್ದು 5,26,022.  ಆಂಧ್ರದಲ್ಲಿ 61,583. ಆಂಧ್ರಕ್ಕಾದ ನಷ್ಟ 12,225 ಲಕ್ಷ, ಮನವಿ ಸಲ್ಲಿಸಿದ್ದು 6 ಸಾವಿರ ಕೋಟಿಗೆ. ನಮಗಾದ ಆರಂಭಿಕ ನಷ್ಟ 16,500 ಕೋಟಿ. ಮನವಿ ಸಲ್ಲಿಸಿದ್ದು 10 ಸಾವಿರ ಕೋಟಿಗೆ. ಕರ್ನಾಟಕಕ್ಕೆ, ಆಂಧ್ರಕ್ಕೆ ಸಿಕ್ಕಿದ್ದು ಒಂದೊಂದು ಸಾವಿರ ಕೋಟಿ. ಬೇಡವೆಂದರೂ ಈ ತುಲನೆಗಳನ್ನು ಜನ ಮಾಡ್ತಾರೆ. ಕೇಂದ್ರದ ಮುಂದೆ ನಮ್ಮ ಧ್ವನಿ ಇನ್ನು ಗಟ್ಟಿಯಾಗಬೇಕಾಗಿದೆ.  ಕೆಲವೊಮ್ಮೆ ಒಳ್ಳೆಯತನವೇ ಮಾರಕವಾಗುತ್ತದೆ.  ಹಾಗೇನೇ ಕರ್ನಾಟಕದ ಒಳ್ಳೇಯತನ, ಶಾಂತಿ ಪ್ರಿಯತೆ ಹಲವಾರು ಬಾರಿ ನಾವು ಅನ್ಯಾಯವನ್ನುಸಹಿಸಿಕೊಳ್ಳುವಂತೆ ಮಾಡುತ್ತಿವೆ.  ನಾವು ಸರ್ಕಾರ, ಶಾಸಕರು, ಸಂಸದರು ಒಟ್ಟಾಗಿ ಧ್ವನಿ ಎತ್ತಿ ನೆಲೆಯನ್ನೆ ಕಳೆದುಕೊಂಡ ಜನರು ಬದುಕನ್ನು ಕಟ್ಟಿಕೊಳ್ಳಲು, ಅವರ ಬಾಳಿನಲ್ಲಿ ಬೆಳಕು ಮೂಡಿಸಲು ಒಗ್ಗೂಡಿ ಪ್ರಯತ್ನ ಮಾಡಬೇಕಾದ್ದು ನಮ್ಮ ಧರ್ಮ. ‘ಇದೇ ಮಾನವ ಧರ್ಮ’

(ಶೋಭಾ ಕರಂದ್ಲಾಜೆ)

Quotes

No authority can save us, nobeliefs. If there is a God, all can find Him. No one needs to be told it iswarm; all can discover it for themselves. So it should be with God. He shouldbe a fact in the consciousness of every person

— Swami Vivekananda

Newsletter

Get latest updates of my blog, news, media watch in your email inbox. subscribe to my newsletter