Shobha Karndlaje

Untitled-2

BJP Karnataka

ನಾವು ಇಷ್ಟು ದುರ್ಬಲರೇ?

ಹಿಂದುಸ್ಥಾನ, ಭಾರತ, ಭರತಖಂಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಈಗಿನ ಪಾಕಿಸ್ತಾನ, ಬಾಂಗ್ಲಾ, ನೇಪಾಳ, ಟಿಬೇಟ್, ಶ್ರೀಲಂಕಾ ಸೇರಿದಂತೆ ಇದ್ದ ಅಖಂಡ ಭಾರತದ ಹಲವಾರು ಐತಿಹಾಸಿಕ, ಧಾರ್ಮಿಕ ಸ್ಥಳಗಳ ಬಗ್ಗೆ ನಮ್ಮ ವೇದ ಪುರಾಣಗಳಲ್ಲಿ ಉಲ್ಲೇಖವಿದೆ. ಮಹಾಭಾರತದ ಗಾಂಧಾರ ದೇಶ ಈಗಿನ ಪಾಕಿಸ್ತಾನದಲ್ಲಿತ್ತು ಎನ್ನುತ್ತೇವೆ. ತಾಯಿ ಭಾರತಿ ತನ್ನ ಒಂದೊಂದೇ ಅಂಗಗಳನ್ನು ಕಳಚಿಕೊಳ್ಳುತ್ತಾ ಈಗ ತನ್ನ ತಲೆಯನ್ನು ಕಳಚಿಕೊಳ್ಳುವಷ್ಟು, ತುಂಡು ಮಾಡಿಕೊಳ್ಳುವಷ್ಟು ದುರ್ಬಲಳಾಗಿ ನಿಂತಿದ್ದಾಳೆ. ಮಗ ಸಮಾಜದ್ರೋಹಿ, ದೇಶದ್ರೋಹಿ ಆದಾಗ ತಾಯಿ ಬಹಳ ನೊಂದು ಕರುಳು ಹಿಚಿಕಿಕೊಂಡು ಹೇಳುತ್ತಾಳೆ  “ಇವನು ನನ್ನ ಹೊಟ್ಟೆಯಲ್ಲೇ ಹುಟ್ಟಬಾರದಾಗಿತ್ತು” ಯಾವ ತಾಯಿಯು ಅಂತಃಕರಣದಿಂದ ಈ ಮಾತನ್ನು ಹೇಳಲು ಬಯಸುವುದಿಲ್ಲ. ಆದರೆ ಅನಿವಾರ್ಯವಾಗಿ ಅವಳ ಬಾಯಿಂದ ಈ ಉದ್ಗಾರ ಹೊರಡುತ್ತದೆ. 100 ಕೋಟಿ ಮಕ್ಕಳನ್ನು ಹೊತ್ತುಕೊಂಡಿರುವ ತಾಯಿ ಭಾರತಿಯ ಪರಿಸ್ಥಿತಿ ಹೇಗಿರಬಹುದು? ತಾಯಿಯ ದೇಹದ ಅಂಗಾಂಗಗಳು ತುಂಡಾಗುತ್ತಿದ್ದರೂ ತನ್ನ ಮಕ್ಕಳಿಗೆ ಏನೂ ಅನ್ನಿಸುವುದಿಲ್ಲ. ಪ್ರತಿಭಟನೆಯ ಸೊಲ್ಲು ಇಲ್ಲ.

1940ರ ಅಧಿವೇಶನದಲ್ಲಿ ಮುಸ್ಲಿಂ ಲೀಗ್ ತನ್ನ ಅಜೆಂಡಾದಲ್ಲಿ ಮುಸ್ಲಿಂರಿಗೆ ಪ್ರತ್ಯೇಕ ದೇಶ ಪಾಕಿಸ್ತಾನದ ನಿರ್ಮಾಣವನ್ನು ಘೋಷಿಸಿತ್ತು. ಕೇವಲ, ಏಳೇ ವರ್ಷಗಳಲ್ಲಿ ಅದು ತನ್ನ ಉದ್ದೇಶಿತ ಗುರಿಯನ್ನು ಸಾಧಿಸುವಲ್ಲಿ ಯಶಸ್ವಿಯಾಯಿತು. ಮುಸ್ಲಿಂ ಲೀಗ್‌ನ ಕನಸ್ಸನ್ನು ಮೊಳಕೆಯಲ್ಲೆ ಚಿವುಟಬೇಕಾದ ಕಾಂಗ್ರೇಸ್ ನಾಯಕರು, ಬ್ರಿಟಿಷರು ಮಹಮ್ಮದ್ ಆಲಿ ಜಿನ್ನಾರವರಿಗೆ ನೀರೇರೆದು ಪೋಷಿಸಿದರು. ಪರಿಣಾಮ ಭಾರತ ಇಬ್ಭಾಗವಾಯಿತು. ಧರ್ಮದ ಆಧಾರದಲ್ಲಿ ತುಂಡಾಯಿತು. ದೇಶ ತುಂಡಾಗುವ ಮೊದಲು ನನ್ನ ದೇಹ ತುಂಡು ಮಾಡಿ ಎಂದು ಸಾರಿದ್ದ ಮಹಾತ್ಮ ಗಾಂಧೀಜಿಯ ಎದುರೇ ಭಾರತ ಪಾಕಿಸ್ತಾನ ನಿರ್ಮಾಣವಾಯಿತು. ಪಾಕಿಸ್ತಾನಕ್ಕೆ ಸೇರಿದ್ದ ಪ್ರದೇಶದಲ್ಲಿದ್ದ ಲಕ್ಷಾಂತರ ಹಿಂದೂಗಳನ್ನು ಹತ್ಯೆ ಮಾಡಿ, ಕತ್ತುಸೀಳಿ, ಹೆಂಗಸರ ಗುಪ್ತಾಂಗಗಳನ್ನು ಭೇದಿಸಿ ಕ್ರೂರವಾದ ರೀತಿಯಲ್ಲಿ ಭಾರತಕ್ಕೆ ಕಳುಹಿಸಲಾಯಿತು. ಸಾವಿರಾರು ಜನ ಭಾರತಕ್ಕೆ ಓಡಿಬಂದರು. ರಕ್ತಪಾತದಿಂದಲೇ ಪಾಕಿಸ್ತಾನದ ಇತಿಹಾಸ ಆರಂಭವಾಯಿತು. ಜಿನ್ನಾರವರು ಅಂದೊಮ್ಮೆ ಘೋಷಣೆ ಮಾಡಿದರು “ಹಸತೇ ಲೆಂಗೇ ಪಾಕಿಸ್ತಾನ್, ಲಡತೇ ಲೆಂಗೆ ಹಿಂದೂಸ್ತಾನ್”. ನಗ್ತಾ ಪಾಕಿಸ್ತಾನ ತಗೊಂಡಿವಿ, ಹೋರಾಟ ಮಾಡಿ ಹಿಂದೂಸ್ತಾನ ಪಡಿತೀವಿ. ಇಂದಿನ ಕಾಶ್ಮೀರದ ಸ್ಥಿತಿ ನೋಡಿದರೆ ಇದು ಸತ್ಯವಾಗುತ್ತೇನೋ ಅನ್ನಿಸುತ್ತದೆ.

ನಮ್ಮ ದೇಶವನ್ನಾಳುವ ನಾಯಕರಿಗೆ ಏನಾಗಿತ್ತೋ, ಏನಾಗುತ್ತಿದೇಯೋ ತಿಳಿಯುತ್ತಿಲ್ಲ. ಸ್ವಾತಂತ್ರ್ಯ ಬಂದ ನಂತರ ನಡೆದ ಯುದ್ದದ ಸಂದರ್ಭದಲ್ಲಿ ಕಾಶ್ಮೀರದ ಬಹುಭಾಗವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟೇವು. ಅದೇ ಇಂದು ಪಾಕ್ ಆಕ್ರಮಿತ ಕಾಶ್ಮೀರವಾಗಿ, ಭಯೋತ್ಪಾದಕರಿಗೆ ತರಬೇತಿ ನೀಡುವ ತಾಣವಾಗಿ ನಮ್ಮ ದೇಶದ ತಲೆ ಮೇಲೆ ತೂಗುತ್ತಿರುವ ಕತ್ತಿಯಾಗಿದೆ. ಭಾರತದ ಮೇಲೆ ಚೀನಾ ಆಕ್ರಮಣ ಮಾಡಿತು. ಅಂದಿನ ಪ್ರಧಾನಿ ಲೋಕಸಭೆಯಲ್ಲಿ ಭಾಷಣ ಮಾಡಿದರು “ಹಿಮಾಲಯದ ಆ ಬೆಟ್ಟಗಳಲ್ಲಿ ಒಂದು ಹುಲ್ಲು ಕಡ್ಡಿಯೂ ಬೆಳೆಯುವುದಿಲ್ಲ ಆ ಪ್ರದೇಶವನ್ನು ಬಿಟ್ಟು ಬಿಡೋಣ” ಭಾರತೀಯರ ಶ್ರದ್ಧಾ ಕೇಂದ್ರವಾದ ಮಾನಸ ಸರೋವರ, ಕೈಲಾಸ ನಮ್ಮ ಕೈ ಬಿಟ್ಟು ಹೊಯಿತು. ಅದ್ದಕ್ಕಿಂತಲೂ ಹೆಚ್ಚು ದೇಶದ ರಕ್ಷಣಾ ದೃಷ್ಟಿಯಿಂದ ಆಯಕಟ್ಟಿನ ಪ್ರದೇಶ, ಎತ್ತರದ ಪ್ರದೇಶವನ್ನು ಕಳೆದುಕೊಂಡೆವು. ಇದರ ಪರಿಣಾಮ ಇಂದು ಚೀನಾ ಹಿಮಾಲಯದಿಂದ ಕೆಳಗಿಳಿದು ಸಿಕ್ಕಿಂ, ಅರುಣಾಚಲ ಪ್ರದೇಶಕ್ಕೆ ಲಗ್ಗೆ ಇಟ್ಟಿದೆ. ಅದೂ ನನಗೇ ಸೇರಿದ್ದು ಎಂಬ ದಾಷ್ಟ್ಯ ತೋರಿಸುತ್ತಿದೆ. ನಮ್ಮ ದೇಶದ ಅಂಗವಾದ ಅರುಣಾಚಲ ಪ್ರದೇಶಕ್ಕೆ ನಮ್ಮ ಪ್ರಧಾನಿ ಹೋಗೋದಕ್ಕೆ ತಕರಾರು ಮಾಡುತ್ತಿದೆ.

ಬಾಂಗ್ಲಾದ ಭಾರತದ ಮಧ್ಯೆ ಇರುವ ತೀಸ್ ಬೀಘಾ ಅನ್ನುವ ಅಯಾಕಟ್ಟಿನ ಪ್ರದೇಶವನ್ನು ಪಿ.ವಿ.ನರಸಿಂಹರಾವ್‌ರವರ ಕಾಲದಲ್ಲಿ ಬಾಂಗ್ಲಾಕ್ಕೆ ಬಿಟ್ಟುಕೊಟ್ಟೀವಿ. ಇದರ ಪರಿಣಾಮವಾಗಿ ಭಾರತ, ಬಾಂಗ್ಲಾ ಗಡಿಯಲ್ಲಿ ಇಂದು ನಿರಂತರವಾಗಿ ಶಸ್ತ್ರಾಸ್ತ್ರ ಸಾಗಟ, ಮಾನವ ಸಾಗಣೆ ನಡೆಯುತ್ತಿದೆ. ಲಕ್ಷಾಂತರ ಬಾಂಗ್ಲಾದೇಶಿಗಳು ಭಾರತಕ್ಕೆ ಬಂದು ಇಲ್ಲಿನ ಸರ್ಕಾರಿ ಸೌಲಭ್ಯಗಳನ್ನು ಪಡೆದು ನಮ್ಮ ವಿರುದ್ದವೇ ಭಯೋತ್ಪಾದಕ ಚಟುವಟಿಕೆ ನಡೆಸುತ್ತಿದ್ದಾರೆ.

ಕಾಶ್ಮೀರ ಹೊತ್ತಿ ಹುರಿಯುತ್ತಿದೆ. ಇಲ್ಲಿ ಶಾಂತಿ ನೆಲೆಸುವುದು ಪಾಕಿಸ್ತಾನಿ ಪ್ರೇರಿತ ಭಯೋತ್ಪಾದಕರಿಗೆ ಬೇಕಿಲ್ಲ. ಕೆಲವು ರಾಜಕೀಯ ಪಕ್ಷಗಳಿಗೂ ಶಾಂತಿ ಬೇಕಿಲ್ಲ. ಕಾಶ್ಮೀರದ ಮೂಲ ನಿವಾಸಿಗಳಾದ ಕಾಶ್ಮೀರಿಪಂಡಿತರು ದೆಹಲಿಯ ಬೀದಿಯಲ್ಲಿ ಟೆಂಟ್‌ನಲ್ಲಿದ್ದಾರೆ. ಲಕ್ಷಾಂತರ ಎಕರೆ ಸೇಬು ತೋಟ, ವ್ಯಾಪಾರ, ವ್ಯವಹಾರ ಎಲ್ಲಾ ಬಿಟ್ಟು ಪ್ರಾಣ ಉಳಿಸಿಕೊಳ್ಳಲು ಓಡಿ ಬಂದರು. ಎದುರಿಸಿದವರು ಹೆಣವಾದರು. ಇಂದು ಕಾಶ್ಮೀರದಲ್ಲಿ ಟಾರ್ಚ್ ಹಾಕಿ ಹುಡುಕಿದರೂ ಒಬ್ಬನೇ ಒಬ್ಬ ಹಿಂದೂ ಸಿಗುವುದಿಲ್ಲ. ಪ್ರತಿ ವರ್ಷ ಭಾರತದ ಬಜೆಟ್‌ನಲ್ಲಿ ದೊಡ್ಡ ಮೊತ್ತದ ಹಣ ಕಾಶ್ಮೀರಕ್ಕೆ ಹೋಗುತ್ತಿದೆ. ಮೂಲಭೂತ ಸೌಕರ್ಯಗಳು ದೊರೆತಿವೆ. ಅಭಿವೃದ್ಧಿಯಾಗಿದೆ. ಆದರೆ ರಕ್ತಪಾತ ನಿಂತಿಲ್ಲ. ಕೆಲವರು ಕಾಶ್ಮೀರ ಪಾಕಿಸ್ತಾನಕ್ಕೆ ಸೇರಬೇಕು ಅನ್ನುತ್ತಾರೆ. ಇನ್ನೂ ಕೆಲವರು ನಮಗೆ ಪ್ರತ್ಯೇಕ ರಾಷ್ಟ್ರ ಬೇಕು ಅನ್ನುತ್ತಾರೆ. ನಾವು ಕೆಲವರು ಕಾಶ್ಮೀರ ಭಾರತದ ಅವಿಬಾಜ್ಯ ಅಂಗ ಅನ್ನುತ್ತಿದ್ದೇವೆ. ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ ಕಾಶ್ಮೀರ ಪ್ರತ್ಯೇಕ ರಾಷ್ಟ್ರವಾಗಿತ್ತು. ಭಾರತಕ್ಕೊಂದು ಸಂವಿಧಾನ, ಕಾಶ್ಮೀರಕ್ಕೊಂದು ಸಂವಿಧಾನ, ಭಾರತಕ್ಕೊಂದು ರಾಷ್ಟ್ರ ಧ್ವಜ, ಕಾಶ್ಮೀರಕ್ಕೊಂದು ರಾಷ್ಟ್ರ ಧ್ವಜ, ಭಾರತಕ್ಕೊಬ್ಬ ಪ್ರಧಾನಿ, ಕಾಶ್ಮೀರಕ್ಕೊಬ್ಬ ಪ್ರಧಾನಿಯಿದ್ದರು. ಈ ಬಗ್ಗೆ ಭಾರತ ಸರ್ಕಾರಕ್ಕಿದ್ದ ನಿರ್ಲಕ್ಷ ಧೋರಣೆ. ನೆಹರುರವರ ಮೃದು ಧೋರಣೆಯನ್ನು ವಿರೋಧಿಸಿ ಡಾ|| ಶ್ಯಾಂ ಪ್ರಸಾದ್ ಮುಖರ್ಜಿ ಕೇಂದ್ರದಲ್ಲಿ ಮಂತ್ರಿಗಿರಿಗೆ ರಾಜಿನಾಮೆ ಕೊಟ್ಟು ಭಾರತೀಯ ಜನಸಂಘ ಸ್ಥಾಪಿಸಿ ಕಾಶ್ಮೀರಕ್ಕಾಗಿ ಹೋರಾಟಕ್ಕೆ ಇಳಿದರು. ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಘೋಷಿಸಿದರು. ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿ ಹೋರಾಟ ಆರಂಭಿಸಿದರು. ಒಂದು ದೇಶದಲ್ಲಿ ಎರಡು ರಾಷ್ಟ್ರ ಧ್ವಜ, ಎರಡು ಸಂವಿಧಾನ, ಎರಡು ಪ್ರಧಾನಿ ಇರಕೂಡದು ಎಂದು ಹೇಳಿ ಹೋರಾಟ ಮಾಡಿದ ಅವರನ್ನು ಬಂಧಿಸಲಾಯಿತು. ಬಂಧನದಲ್ಲಿರುವಾಗಲೇ ನಿಗೂಢವಾಗಿ ಅವರ ಸಾವಾಯಿತು. ಇದರ ಪರಿಣಾಮವಾಗಿ ಕಾಶ್ಮೀರ ಭಾರತದಲ್ಲೆ ಉಳಿಯಿತು. ನಮ್ಮ ತಾಯಿ ಭಾರತಿಯ ತಲೆಯನ್ನು ಉಳಿಸುವ ಕೆಲಸ ಅಂದು ಡಾ|| ಶ್ಯಾಮ ಪ್ರಸಾದ್ ಮುಖರ್ಜಿಯವರು ತನ್ನ ತಲೆಯನ್ನು ಕೊಡುವುದರ ಮೂಖಾಂತರ ಮಾಡಿದರು.

ಇಂದಿನ ನಮ್ಮ ಭಾರತದ ಪ್ರಧಾನಿಗೆ ಏನಾಗಿದೆ? ಕಾಶ್ಮೀರದಲ್ಲಿರುವ ಭಯೋತ್ಪ್ಪಾದಕರನ್ನು ಮಟ್ಟಹಾಕಿ ಶಾಂತಿ ನೆಲೆಸಲು ಪ್ರಯತ್ನಿಸಬೇಕಾದ ಪ್ರಧಾನಿ ಕಾಶ್ಮೀರದ ಸ್ವಾಯತ್ತತೆ ಬಗ್ಗೆ ಮಾತಾನಾಡುತ್ತಿದ್ದಾರೆ. ಸ್ವಾತಂತ್ರ್ಯ ಬಂದು ಭಾರತ ಇಬ್ಭಾಗವಾದ 63 ರೇ ವರ್ಷಗಳಲ್ಲಿ ಡಾ|| ಶ್ಯಾಮ್ ಪ್ರಸಾದ್ ಮುಖರ್ಜಿಯವರ ಬಲಿದಾನವಾಗಿ 58 ವರ್ಷಗಳಲ್ಲಿ ಕಾಶ್ಮೀರವನ್ನು ಮತ್ತೇ ಭಾರತದಿಂದ ತುಂಡು ಮಾಡುವ ಮಟ್ಟಕ್ಕೆ ಭಾರತ ದುರ್ಬಲವಾಯಿತೇ? ಕಾಶ್ಮೀರ ಇಲ್ಲದ ಭಾರತದ ಭೂಪಟವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇಂತಹ ತಲೆ ಇಲ್ಲದ ಭಾರತಕ್ಕೆ ಮನಮೋಹನ್ ಸಿಂಗ್ ಪ್ರಧಾನಿಯಾಗಿರಲು ಬಯಸಿದ್ದಾರೆಯೇ?. ಮುಸ್ಲಿಂಲೀಗ್ ತಾನು ಘೋಷಣೆ ಮಾಡಿ 7 ವರ್ಷಗಳಲ್ಲಿ ಪಾಕಿಸ್ತಾನ ಸಿಕ್ಕಿತು. ಅವತ್ತು ಜಿನ್ನಾ ಹೋರಾಟ ಮಾಡಿ ಹಿಂದೂಸ್ಥಾನ ಪಡೆಯುತ್ತೇವೆ ಎಂದಿದ್ದು ಸತ್ಯವಾಗುತ್ತಿದೆಯೇ? ಕೇವಲ 63 ವರ್ಷಗಳಲ್ಲಿ ಭಾರತದ ಮುಕುಟವನ್ನು, ಸುಂದರವಾದ ಕಣಿವೆ ಪ್ರದೇಶವನ್ನು ಸ್ವಾಯತ್ತೆಯ ಮೂಲಕ ಪಾಕಿಸ್ತಾನದ ಅಡ್ಡೆಯನ್ನಾಗಿ ಮಾಡಲು ಕೇಂದ್ರ ಸರ್ಕಾರ ಹೊರಟಿದೆಯೇ?.

ಏನಾಗಿದೆ ಭಾರತಕ್ಕೆ? ಗಡಿಯಲ್ಲಿ ಮತ್ತು ಕಾಶ್ಮೀರದಲ್ಲಿ ನಮ್ಮ ಸೈನಿಕರು ಪ್ರಾಣದ ಹಂಗು ತೊರೆದು ಹೋರಾಡುತ್ತಿದ್ದಾರೆ. ಪ್ರತಿನಿತ್ಯ ದೇಶದ ರಕ್ಷಣೆಗಾಗಿ ಬಲಿದಾನವಾಗುತ್ತಿದ್ದಾರೆ. ಇವರ ಪ್ರಾಣಕ್ಕೆ ಬೆಲೆ ಇಲ್ಲವೇ? ಕಾಶ್ಮೀರವನ್ನು ಇಷ್ಟು ಸಲೀಸಾಗಿ ಬಿಟ್ಟುಕೊಡುವುದಿದ್ದರೆ ಇಷ್ಟೊಂದು ಹೋರಾಟ, ಬಲಿದಾನಗಳು ಯಾಕೆ ಬೇಕಿತ್ತು?  ದೇಶದ ರಕ್ಷಣೆಯ ಹೊಣೆ ಹೊತ್ತ ಪ್ರಧಾನಿಯೇ ನಿರಾಶರಾದರೆ, ದುರ್ಬಲವಾದರೆ ದೇಶವನ್ನು ಯಾರು ಕಾಪಾಡಬೇಕು? ಪಾಕಿಸ್ತಾನ ಪ್ರೇರಿತ ಭಯೋತ್ಪಾದಕರನ್ನು, ಭಯೋತ್ಪಾದಕರಿಗೆ ಕುಮ್ಮಕ್ಕು ಕೊಡುತ್ತಿರುವ ಸ್ಥಳೀಯ ಜನ ಮತ್ತು ನಾಯಕರನ್ನು ಮಟ್ಟ ಹಾಕಲು ಕೇಂದ್ರ ಸರ್ಕಾರ ಮುಂದಾಗಬೇಕು. ತಾಳ್ಮೆಗೂ ಮಿತಿಯಿದೆ. ಭಾರತೀಯರು ಬಹಳ ತಾಳ್ಮೆಯಿಂದ ಕಾಶ್ಮೀರದ ಘಟನೆ, ಕೇಂದ್ರ ಸರ್ಕಾರ ನಿರ್ಧಾರಗಳನ್ನು ಗಮನಿಸುತ್ತಿದ್ದಾರೆ. ಒಂದು ಕಡೆ ಕಾಶ್ಮೀರ, ಇನ್ನೊಂದು ಕಡೆ ಸಿಕ್ಕಿಂ, ಅರುಣಾಚಲ ಪ್ರದೇಶ, ಮಣಿಪುರ ನಮ್ಮ ಕೈ ಬಿಟ್ಟು ಹೊಗುವ ಸ್ಥಿತಿ, ದೇಶದ ಏಕತೆ, ಅಖಂಡತೆಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳುತ್ತಿರುವ ಸರ್ಕಾರ ಇದನ್ನೆಲ್ಲಾ ನೋಡಿ ಭಾರತದ ಭವಿಷ್ಯವೇನು ಎಂಬ ಪ್ರಶ್ನೆ  ನಮ್ಮನ್ನು ಕಾಡುತ್ತಿದೆ. ಸ್ವಾತಂತ್ರ್ಯ ಬಂದು 63 ವರ್ಷಗಳಲ್ಲಿ ನಾವ್ಯಾಕೆ ಇಷ್ಟು ದುರ್ಬಲರಾದಿವಿ. 100 ಕೋಟಿ ಜನರಿದ್ದರೂ, ಪ್ರಾಣಕೊಡುವ  ಕೆಚ್ಚೆದೆಯ ಸೈನಿಕರಿದ್ದರೂ, ನಮ್ಮ ದೇಶದ ಆಂತರಿಕ ಮತ್ತು ಹೊರ ಶತ್ರುಗಳನ್ನು ಮಟ್ಟಹಾಕಲು ನಮಗ್ಯಾಕೆ ಆಗುತ್ತಿಲ್ಲ? ಇಚ್ಚಾ ಶಕ್ತಿಯ ಕೊರತೆಯೇ? ದೇಶ ಪ್ರೇಮದ ಕೊರತೆಯೇ? ಓಟ್‌ಬ್ಯಾಂಕ್ ರಾಜಕಾರಣ ನಮ್ಮ ಕಣ್ಣನ್ನು ಮಂಜಾಗಿಸಿದೆಯೇ? ಅಥವಾ ದೇಶದ ಬಗ್ಗೆ, ದೇಶದ ರಕ್ಷಣೆ ಬಗ್ಗೆ ಯೋಚಿಸಲು ಸಮಯ ಸಿಕ್ಕಿಲ್ಲವೇ? ಯಾಕೆ, ಯಾಕೆ ಎಂಬ ಪ್ರಶ್ನೆ ನಿದ್ದೆಗೆಡಿಸುತ್ತಿದೆ? ದೇಶದಲ್ಲಿ ರಾಜಕೀಯ ಪಕ್ಷಗಳು, ಸಂಘಟನೆಗಳು ಯಾಕೆ ಬಾಯಿ ತೆರೆಯುತ್ತಿಲ್ಲ ಗೊತ್ತಾಗುತ್ತಿಲ್ಲ. ತಾಯಿ ಭಾರತಿ ಇಂತಹ 100 ಕೋಟಿ ನಪುಂಸಕರನ್ನು ಹೆರುವ ಬದಲು ಬಂಜೆಯಾಗಿದ್ದರೂ ಅಡ್ಡಿಯಿಲ್ಲ ಎಂದು ಕೊರಗುತ್ತಿದ್ದಾಳೆಯೇ ಎಂಬ ನೋವು ನನ್ನನ್ನು ಕಾಡುತ್ತಿದೆ. ತಾಯಿಯ ಅಂಗಾಂಗ ಕತ್ತರಿಸುವಾಗ ಸುಮ್ಮನಿರುವ ಮಕ್ಕಳಿಗೆ ದುರ್ಬಲರು, ನಪುಂಸಕರು ಎನ್ನದೆ ಇನ್ನೇನೆಂದು ನಮ್ಮನ್ನು ನಾವು ಕರೆದುಕೊಳ್ಳೋಣ?.

ಇತೀ ನಿಮ್ಮವಳೆ,
ಶೋಭಾ

Quotes

Every artist was first anamateur.

— Ralph Waldo Emerson

Newsletter

Get latest updates of my blog, news, media watch in your email inbox. subscribe to my newsletter