Shobha Karndlaje

Untitled-2

BJP Karnataka

ನಮ್ಮ ನಾಯಕರಿಗೇನಾಗಿದೆ?

ಸ್ವಾತಂತ್ರ್ಯ ಸಿಕ್ಕಿದ 64  ವರ್ಷಗಳಲ್ಲೇ ಅಧಿಕಾರದ ಮದ, ಓಟು ಬ್ಯಾಂಕಿನ ಪಿತ್ತ, ಬುದ್ಧಿಶಕ್ತಿಯ ಭ್ರಮಣೆ, ರಾಷ್ಟ್ರಪ್ರೇಮದ ದಾರಿದ್ರ್ಯ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಆಗುತ್ತದೆಯೆಂದು ಅಂದು ದೇಶಕ್ಕಾಗಿ ಹೋರಾಟ ಮಾಡುತ್ತಿದ್ದ ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ಅನಿಸಿದ್ದರೆ, ಆ ಮುಂದಾಲೋಚನೆ ಅವರು ಮಾಡಿದ್ದರೆ ಸ್ವಾತಂತ್ರ್ಯ ಹೋರಾಟವೇ ಮಾಡುತ್ತಿರಲಿಲ್ಲವೇನೋ! ಎಂದು ನಮಗನಿಸಲು ಆರಂಭವಾಗಿದೆ. ಯಾವ ಕನಸನ್ನು ಹೊತ್ತು ಅವರು ಹೋರಾಟ ಮಾಡಿದ್ದರೋ, ಆ ಕನಸನ್ನು ನನಸು ಮಾಡಲು ಇಡೀ ದೇಶ ಒಟ್ಟಾಗಿ ಶ್ರಮಿಸುವ ಬದಲು ನಮ್ಮ ನಮ್ಮಲ್ಲೇ ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬ ಕಿತ್ತಾಟ, ಇವರ ಕಿತ್ತಾಟಕ್ಕಿಂತಲೂ ಹೆಚ್ಚು ಅಪಾಯಕಾರಿಯಾಗಿರುವುದು – ನಾವು ಹಿಂದೂ ಪರ, ನಾವು ಮುಸ್ಲಿಂ ಪರ ಅನ್ನುವುದನ್ನು ಸಾರಲು ದೇಶದ ನಾಯಕರು ಮುಂದಾಗುತ್ತಿರುವುದು ಅಸಹ್ಯ, ಹೇಸಿಗೆ ತರುವಂತಿದೆ. ಛೇ…ಎಂತಹ ನಾಯಕತ್ವ ನಮ್ಮದು. ಮನಸ್ಸಲ್ಲಿ ರೋಷ, ಜಿಗುಪ್ಸೆ ಎರಡೂ ಉಕ್ಕಿ ಬರುತ್ತಿದೆ, ಎದೆ ಹಿಂಡಿದಂತಾಗುತ್ತಿದೆ.

ಇಭ್ಭಾಗವಾದ ದೇಶದಲ್ಲಿ ಎಲ್ಲ ಧರ್ಮ, ಜಾತಿ, ಮತದವರನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕಾದ ನಾಯಕರು ಕೇವಲ ಖುರ್ಚಿ, ಅಧಿಕಾರ ಅದರಲ್ಲೂ ಶಾಶ್ವತವಾಗಿ ನಮಗೆ ಇರಬೇಕಾದ ಅಧಿಕಾರ, ಅದಕ್ಕಾಗಿ ಓಟಿನ ಬೇಟೆ ಇದರ ಬಗ್ಗೆ ಚಿಂತೆ, ಚಿಂತನೆ ನಡೆಯುವುದು ಬಿಟ್ಟರೆ ಅಂದು ಒಡೆದು ಹೋದ ಮನಸ್ಸನ್ನು ಇಂದಿಗೂ ಜೋಡಿಸುವ ಗಂಭೀರ ಪ್ರಯತ್ನ ಮಾಡುತ್ತಿಲ್ಲ. ಈ ಮನಸ್ಸುಗಳನ್ನು ಜೋಡಿಸುವವರು ಯಾರು? ಪರಸ್ಪರ ವಿಶ್ವಾಸ ಮೂಡುವಂತೆ ಮಾಡುವವರು ಯಾರು? ಹಿಂದಿನ ಕಾಲದಲ್ಲಿ ರಾಜ ದುರ್ಬಲನಾದರೆ ದೇಶದಲ್ಲಿ ಅರಾಜಕತೆ ಉಂಟಾಗುತ್ತಿತ್ತು. ಪಕ್ಕದ ರಾಜ್ಯದ ರಾಜ ದಂಡೆತ್ತಿ ಬಂದು ಆ ರಾಜ್ಯ ಅಥವಾ ದೇಶದ ಮೇಲೆ ತನ್ನ ಹಿಡಿತ ಸಾಧಿಸುತ್ತಿದ್ದ.

ಈಗ ರಾಜ ಪದ್ಧತಿಯಿಲ್ಲ. ಆದರೆ ಅರಾಜಕತೆ ಹಾಗೇನೇ ಕಾಣಿಸಿಕೊಳ್ಳುತ್ತಿದೆ. ದೇಶ ಕಬಳಿಸಲು ಪಕ್ಕದ ದೇಶದವರು ಹೊಂಚು ಹಾಕುತ್ತ ಕುಳಿತಿದ್ದಾರೆ. ಆದರೆ ನಮ್ಮನ್ನಾಳುವವರಿಗೆ ಇದರ ಕಡೆ ಗಮನ ಇಲ್ಲ. ಬದಲಾಗಿ ಕೇವಲ ಅಧಿಕಾರ, ಅಧಿಕಾರ ಹಿಡಿಯಲು ತಂತ್ರ ಮಾತ್ರ ಕಾಣಿಸುತ್ತಿದೆ. ದೇಶದಲ್ಲೇ ಇರುವ ಧರ್ಮವನ್ನು, ಜಾತಿಯನ್ನು ಬಳಸಿಕೊಂಡು ಶಾಶ್ವತವಾಗಿ ಇವರು ಕಚ್ಚಾಡುವಂತೆ ಮಾಡುವ ಹುನ್ನಾರ, ಷಡ್ಯಂತ್ರ ನಡೆಯುತ್ತಿದೆ.

ಇದಕ್ಕೆ ತಾಜಾ ಉದಾಹರಣೆ ಇಂದು ಚರ್ಚೆಯಾಗುತ್ತಿರುವ ಕೇಸರಿ ಭಯೋತ್ಪಾದನೆ ಇದರ ಬಗ್ಗೆ ಇಂದು ನಡೆಯುತ್ತಿರುವ ಚರ್ಚೆ, ಏಕಾಏಕಿ ದೇಶದ ರಕ್ಷಣೆಯನ್ನು ಹೊತ್ತ ಜವಾಬ್ದಾರಿಯುತ ಜಾಗದಲ್ಲಿರುವ ನಮ್ಮ ರಕ್ಷಕನೇ ದೇಶದಲ್ಲಿ ಹೊಸ ಬಾಂಬನ್ನು ಸಿಡಿಸಿದ್ದಾರೆ. ಇದರಿಂದ ಇಡೀ ದೇಶಬಾಂಧವರ ಮೇಲೆ ಏನು ಪರಿಣಾಮ ಬೀರಬಹುದೆಂಬ ಕಲ್ಪನೆ ಇವರಿಗಿತ್ತೋ… ಇಲ್ಲವೋ…ಗೊತ್ತಿಲ್ಲ. ಇದು ಇವರ ವ್ಯಯಕ್ತಿಕ ನಿಲುವೋ ಅಥವಾ ಪಕ್ಷದ ನಿಲುವೋ ಗೊತ್ತಿಲ್ಲ. ಯಾರನ್ನು ಗುರಿಯಾಗಿಸಿ ಇದನ್ನು ಹೇಳಿದ್ದರೋ ಗೊತ್ತಿಲ್ಲ. ದೇಶದ ಗೃಹಸಚಿವರಾಗಿ ಯಾವ ಸಂಘಟನೆ, ಯಾವ ವ್ಯಕ್ತಿ ಭಯೋತ್ಪಾದನೆಯಲ್ಲಿ ತೊಡಗಿಸಿಕೊಂಡಿದ್ದಾನೆ ಎಂಬ ಸಂಪೂರ್ಣ ಮಾಹಿತಿ ಅವರಿಗಿರುತ್ತದೆ. ಇರಬೇಕು. ಆ ರೀತಿ ಸತ್ಯಾಸತ್ಯತೆ ಗೊತ್ತಿದ್ದ ಮೇಲೆ ಯಾರೇ ಆಗಲಿ ಅವರು ಎಷ್ಟೇ ದೊಡ್ಡವರಿರಲಿ, ಅವರ ಹೆಸರು, ಅವರ ಕೃತ್ಯಗಳು ಬಹಿರಂಗಗೊಳ್ಳಲೇಬೇಕು. ಇದು ದೇಶದ ಹಿತದೃಷ್ಟಿಯಿಂದ ಅಗತ್ಯ ಕೂಡ. ನಾವೆಲ್ಲರೂ ದೇಶಬಾಂಧವರು ಹಿಂದೂಗಳು, ಮುಸ್ಲಿಂ, ಕ್ತ್ರೈಸ್ತ, ಪಾರ್ಸಿ, ಜೈನ್ ಯಾರೇ ಇರಲಿ ಈ ದೇಶದಲ್ಲಿ ಒಂದಾಗಿ ಬದುಕಲೇಬೇಕು. ಇದು ಅನಿವಾರ್ಯ.  ಪರಸ್ಪರ ದ್ವೇಷ ಹುಟ್ಟಿಸುವ, ಭಯೋತ್ಪಾದನೆ ಹರಡುವ ಕೆಲಸ ಯಾರೇ ಮಾಡಲಿ ಅವರು ದೇಶದ್ರೋಹಿಗಳು, ಶಿಕ್ಷಾರ್ಹರೇ.

‘ಕೇಸರಿ’ ಎನ್ನುವ ಪದಕ್ಕೆ ಭಾರತದಲ್ಲಿ ತನ್ನದೇ ಆದ ಇತಿಹಾಸವಿದೆ. ಶ್ರದ್ಧೆಯಿದೆ, ಗೌರವವಿದೆ, ಹೆಮ್ಮೆಯಿದೆ. ಕೇಸರಿ ತ್ಯಾಗದ ಸಂಕೇತ. ಉದಯಿಸುವ ಸೂರ್ಯನ ಬಣ್ಣ ಕೇಸರಿ. ಯಜ್ಞದ ಜ್ವಾಲೆಯ ಬಣ್ಣ ಕೇಸರಿ. ಸೂರ್ಯ ಕೇವಲ ಹಿಂದೂಗಳಿಗೆ ಮಾತ್ರ ಬೆಳಕು ಕೊಡುತ್ತಿಲ್ಲ. ಅವನಿಗೆ ಧರ್ಮ, ಜಾತಿ, ದೇಶದ ಪರಿಧಿ ಇಲ್ಲ. ಉರಿಯುತ್ತಿರುವ ಸಣ್ಣ ದೀಪವಿರಲಿ, ಯಜ್ಞವೇ ಇರಲಿ ಬಣ್ಣ ಒಂದೇ, ಬೆಳಕೂ ಒಂದೇ. ಎಲ್ಲರಿಗೂ ಬೆಳಕು ಕೊಡುತ್ತದೆ ಅದೇ  ನಮ್ಮ ದೇಶದಲ್ಲಿ ವಿವಿಧ ಋಷಿಮುನಿಗಳು ಬಳಸುತ್ತಿದ್ದ ಬಟ್ಟೆ ಕೇಸರಿ, ರಾಮಾಯಣದಿಂದ ಇತ್ತೀಚಿನ ರಾಜ ಮಹಾರಾಜರ ತನಕ ಅವರು ಬಳಸುತ್ತಿದ್ದ ರಾಷ್ಟ್ರಧ್ವಜದ ಬಣ್ಣ ಕೇಸರಿ. ಕೇಸರಿ ಬಣ್ಣ ಯಾವುದೇ ಪಕ್ಷದ ಅಥವಾ ಸಂಘಟನೆಯ ಗುತ್ತಿಗೆಯಲ್ಲ. ದೇಶ, ಈ ದೇಶದ ಪರಂಪರೆ, ಚರಿತ್ರೆಯ ಬಗ್ಗೆ ತಿಳಿದಿರುವ, ಗೌರವಿಸುವ ಎಲ್ಲರೂ ಒಪ್ಪಿಕೊಳ್ಳುವ, ಗೌರವಿಸುವ ಬಣ್ಣ ಕೇಸರಿ. ಕೇಸರಿಯ ಮಹತ್ವ ನಮ್ಮ ಕಲ್ಪನೆಗೆ ನಿಲುಕದ್ದು. ಅದು ಅನಂತ.

ಇನ್ನೂ ‘ಭಯೋತ್ಪಾದನೆ’ ಎಂಬ ಪದ ಎಲ್ಲರನ್ನೂ ಬೆಚ್ಚಿ ಬೀಳಿಸುವಂತದ್ದು. ಇದಕ್ಕೆ ಜಾತಿ, ಧರ್ಮದ ಚೌಕಟ್ಟು ಕೊಡಬಾರದು. ದೇಶದ ಹಿತದೃಷ್ಟಿಯಿಂದ ಯೋಚನೆ ಮಾಡುವ ಯಾರೇ ಆಗಲಿ, ಭಯೋತ್ಪಾದನೆ ಯಾರು ಮಾಡಿದರೂ ಅವನು ಭಯೋತ್ಪಾದಕನೆ. ದೇಶದ್ರೋಹಿಯೂ ಆಗುತ್ತಾನೆ ಎಂಬ ಭಾವವಿರಬೇಕು. ಇವನನ್ನು ಯಾರೂ ರಕ್ಷಣೆ ಮಾಡಬಾರದು. ದೇಶದ ರಕ್ಷಣೆ ಮುಖ್ಯನೇ ಹೊರತು ಯಾವುದೇ ಅತಿರೇಕದ ಮತೀಯ ಭಾವನೆಯಲ್ಲ.

ಸನ್ಮಾನ್ಯ ಚಿದಂಬರಂ ಮೊನ್ನೆ ಹೇಳಿದ ‘ಕೇಸರಿ ಭಯೋತ್ಪಾದನೆ’ ಅಂದರೆ ಏನು? ಕೇಸರಿ ಬಟ್ಟೆಯನ್ನು ಹಾಕಿದವರು ಭಯೋತ್ಪಾದಕರೇ? ಕೇಸರಿ ಧ್ವಜವನ್ನು ಹಿಡಿಯುವವರು ಭಯೋತ್ಪಾದಕರೇ? ‘ಕೇಸರಿ’ ಪರವಾಗಿ ಮಾತನಾಡುವವರು ಭಯೋತ್ಪಾದಕರೇ? ಯಾರು ಈ ಭಯೋತ್ಪಾದಕರು? ಎಷ್ಟು ಕಡೆ ಇವರು ಬಾಂಬ್ ಸ್ಪೋಟಿಸಿದ್ದಾರೆ. ನಮ್ಮ ದೇಶದ ಎಷ್ಟು ನಾಯಕರನ್ನು ಇವರು ಕೊಂದಿದ್ದಾರೆ? ಎಷ್ಟು ರಕ್ಷಣಾ ಪಡೆಯವರನ್ನು ಇವರು ಎದೆ ಸೀಳಿದ್ದಾರೆ? ಯಾವ ಪ್ರತ್ಯೇಕ ರಾಜ್ಯ ಅಥವಾ ದೇಶಕ್ಕಾಗಿ ಇವರು ಹೋರಾಟ ಮಾಡಿದ್ದಾರೆ? ಎಷ್ಟು ಏರೋಪ್ಲೇನ್‌ಗಳನ್ನು ಹೈಜಾಕ್ ಮಾಡಿದ್ದಾರೆ? ಎಷ್ಟು ಕಡೆ 1984 ರಲ್ಲಿ ದೆಹಲಿಯಲ್ಲಿ ಆದಂತೆ ನಾಗರಿಕರ ಮಾರಣ ಹೋಮ ಮಾಡಿದ್ದಾರೆ? ಯಾರಿವರು? ದೇಶ ಬಾಂಧವರ ಪ್ರಶ್ನೆ ಇದು. ದೇಶದ ಗೃಹ ಸಚಿವರಿಗೆ ನಿಮ್ಮ ಪ್ರಜೆಗಳ ಪ್ರಶ್ನೆ ಇದು. ನಮಗೆ ಉತ್ತರಬೇಕು.   “ಕೇಸರಿ ಭಯೋತ್ಪಾದನೆ” ಎಂದು ಹೇಳಿ ನೀವೂ ದೇಶದಲ್ಲಿ ಆರಾಮವಾಗಿ ಓಡಾಡಬಹುದು.

ಬಸ್, ರೈಲು, ಕಾರು, ಏರೋಪ್ಲೇನ್‌ನಲ್ಲಿ ತಿರುಗಾಡಬಹುದು. ನೀವು ಹೀರೋನೂ ಆಗಬಹುದು. ಯಾಕೆಂದರೆ ಇದು ಭಾರತ. ಒಂದು ಬಾರಿ “ಇಸ್ಲಾಂ ಭಯೋತ್ಪಾದನೆ” ಎಂದು ಹೇಳಿ ನೋಡಿ ನೋಡೋಣ. ಹೇಳುವ ತಾಕತ್ತು ನಿಮಗಿದೆಯೇ? ಹೀಗೆ ಹೇಳಿ ದೇಶದಲ್ಲಿ ಓಡಾಡುವ ಶಕ್ತಿ ನಿಮಗಿದೆಯೇ? ಇಸ್ಲಾಂ ಅಂದರೆ ಭಯೋತ್ಪಾದನೆ ಅಲ್ಲ ಇದು ನಮಗೂ ಗೊತ್ತಿದೆ. ಆದರೆ ಪಾಕಿಸ್ತಾನದಂತಹ ದೇಶಗಳು ಇಸ್ಲಾಂ ಹೆಸರಲ್ಲಿ ಯುವಕರ ತಲೆಕೆಡಿಸಿ ಭಯೋತ್ಪಾದನೆಯಲ್ಲಿ ತೊಡಗಿಸುತ್ತಿವೆ. ಇದು ಸತ್ಯ ತಾನೆ?. ಗಡಿಯಲ್ಲಿ ಸೈನಿಕರನ್ನು ದಿನ ನಿತ್ಯ ಕೊಲ್ಲುವ, ದೇಶದಲ್ಲಿ ಅಲ್ಲಲ್ಲಿ ಬಾಂಬ್ ಸ್ಪೋಟಿಸುವ, ದೇಶದಲ್ಲಿರುವ ಮಸೀದಿ, ಚರ್ಚ್, ದೇವಸ್ಥಾನಗಳಲ್ಲಿ ಬಾಂಬ್ ಇಡುವ ಮೂಲಕ ಅಶಾಂತಿ ನಿರ್ಮಾಣ ಮಾಡುತ್ತಿರುವ, ಗುಂಡಿನ ದಾಳಿ ನಡೆಸುವ ಪ್ರಕರಣಗಳಲ್ಲಿ ಸಿಕ್ಕಿಬಿದ್ದವರು ಯಾರು? ಮುಸ್ಲಿಮರು ತಾನೆ? ಹಾಗೆಂತ ಎಲ್ಲಾ ಮುಸಲ್ಮಾನರನ್ನು ಭಯೋತ್ಪಾದಕರೆಂದು ಹಣೆ ಪಟ್ಟಿ ಕಟ್ಟಿ ದೇಶದ್ರೋಹಿಗಳನ್ನಾಗಿ ಮಾಡುವುದು ನ್ಯಾಯವೇ? ಭಯೋತ್ಪಾದಕರನ್ನು ಮುಸ್ಲಿಂ ಧರ್ಮ ಮತ್ತು ಪ್ರಜ್ಞಾವಂತ ಮುಸ್ಲಿಂ ಜನರು ಒಪ್ಪುತ್ತಿಲ್ಲ ಅನ್ನುವುದನ್ನು ನಾವೆಲ್ಲರೂ ಅರಿತಿದ್ದೇವೆ.

ದೇಶದಲ್ಲಿ ಸಾಮರಸ್ಯ ಮೂಡಿಸಬೇಕಾದ ನಾಯಕತ್ವಕ್ಕೆ ಯಾಕೆ ಈ ರೀತಿ ಬೌದ್ಧಿಕ ದಿವಾಳಿತನ ಕಾಡುತ್ತಿದೆ? ದೇಶವನ್ನು ನೀವು ಆಳುತ್ತಿರುವುದು ನನ್ನ ಮನೆ ಸುತ್ತ, ನನ್ನ ಕೇರಿಯಲ್ಲಿ, ನನ್ನ ಬೀದಿಯಲ್ಲಿ, ನನ್ನ ಹಳ್ಳಿಯಲ್ಲಿ ಪರಸ್ಪರ ಹೊಂದಾಣಿಕೆಯಿಂದ, ವಿಶ್ವಾಸದಿಂದ ಬಾಳಬೇಕೆಂಬ ಸಂದೇಶ ಕೊಡುವುದಕ್ಕೊ ಅಥವಾ ಹಸಿರು, ಕೇಸರಿ ಎಂದು ಕಿತ್ತಾಟ ಮಾಡಿ ಸಾಯಿರಿ ಮಕ್ಳಾ ಎಂದು ಸಾರಲಿಕ್ಕೊ. ಯಾಕೆ? ಯಾಕೆ? ನಿಮ್ಮ ಉದ್ದೇಶ ನಮಗೆ ಅರ್ಥ ಆಗುತ್ತಿಲ್ಲ. ಯಾರೋ ಅತಿರೇಕದ ಅವಿವೇಕಿ ಯುವಕರು ಎಲ್ಲೋ ಯಾವುದೋ ಪ್ರಚೋದನೆಯಿಂದ ಒಂದು ಕೃತ್ಯ ಮಾಡಿದರೆ ಭಾರತದಲ್ಲಿರುವ ಕೇಸರಿಯಲ್ಲಿ ನಂಬಿಕೆಯಿರುವ ಎಲ್ಲಾರೂ ಭಯೋತ್ಪಾದಕ ರಾಗುತ್ತಾರೆಯೇ ಗೃಹಮಂತ್ರಿಗಳೇ. ಮನೆಯಲ್ಲಿರುವ ಗೃಹಿಣಿ ತನ್ನ ಪಕ್ಕದ ಮನೆಯ ಅಬ್ದುಲ್ಲಾನಿಗೂ ತನ್ನ ಮಗನಿಗೂ ಒಟ್ಟಿಗೆ ಊಟ ಬಡಿಸುತ್ತಾಳೆ. ದೀಪಾವಳಿಗೆ ತನ್ನ ಮಗನ ಜೊತೆ ಅವನಿಗೂ ಹೊಸ ಬಟ್ಟೆ ಕೊಡಿಸಿ ಮಕ್ಕಳಿಬ್ಬರೂ ಆಟವಾಡುವುದನ್ನು ನೋಡಿ ಸಂಭ್ರಮಿಸುವ ಸಂಸ್ಕೃತಿ ಇರುವ ದೇಶ ನಮ್ಮದು. ಕೇವಲ ಓಟಿಗಾಗಿ, ನಮ್ಮಲ್ಲಿ ಸಂಶಯವನ್ನು ಮೂಡಿಸುವ ನಾವು ಪರಸ್ಪರ ಕಿತ್ತಾಡುವಂತೆ ಮಾಡುವ ಕೆಟ್ಟ ರಾಜಕಾರಣ ಮಾಡಬೇಡಿ. ಭಯೋತ್ಪಾದಕರು ಯಾರೇ ಇರಲಿ ಅವನು ಸಮಾಜದ ಸ್ವಾಸ್ಥ್ಯಕ್ಕೆ, ರಾಷ್ಟ್ರದ ರಕ್ಷಣೆಗೆ ಮಾರಕ. ಅಂತಹವರನ್ನು ಮಟ್ಟ ಹಾಕಿ, ನೇಣಿಗೇರಿಸಿ. ಇದರಲ್ಲಿ ಹಸಿರು, ಕೇಸರಿ, ಬಿಳಿ ಎಂದು ನೋಡಬೇಡಿ. ಯಾವ ಸಂಘಟನೆ ಇಂತಹ ಕೃತ್ಯದಲ್ಲಿ ತೊಡಗಿದೆ ಎಂದು ಪತ್ತೆ ಹಚ್ಚಿ. ದೇಶದ ಮುಂದೆ ಅಂತಹವರ ಬಣ್ಣ ಬಯಲು ಮಾಡಿ. ಇಡೀ ದೇಶ ನಿಮಗೂ ಸಲ್ಯೂಟ್ ಹೊಡೆಯುತ್ತದೆ. ನಿಮ್ಮ ಜೊತೆ ಎದ್ದು ನಿಲ್ಲುತ್ತದೆ. ಗಡಿಯಲ್ಲಿ ನುಸುಳುವ ಭಯೋತ್ಪಾದಕರನ್ನು ಛತ್ತೀಸಗಡ್, ಜಾರ್ಖಂಡ್‌ನಲ್ಲಿ ನಮ್ಮ ಯೋಧರನ್ನು ಉಡಾಯಿಸುತ್ತಿರುವ ನಕ್ಸಲರನ್ನು ಮಟ್ಟ ಹಾಕಿ ನಿಮ್ಮ ಪೌರುಷವನ್ನು ತೋರಿಸಿ. ‘ಕೇಸರಿ ಭಯೋತ್ಪಾದನೆ’ ಎಂದು ಹೇಳಿದರೆ ನಿಮ್ಮ ಗೌರವ ಜಾಸ್ತಿಯಾಗುತ್ತದೆ ಎಂಬ ಭ್ರಮೆಯಿಂದ ಹೊರಬಂದು ಎಲ್ಲಾ ಭಾರತೀಯರು ಒಟ್ಟಾಗಿ ಬದುಕಬೇಕೆಂಬ ಸಂದೇಶ ನೀಡಿ. ದೇಶದ್ರೋಹಿಗಳು ಯಾರೇ ಆಗಲಿ ನನ್ನಿಂದ ತಪ್ಪಿಸಿಕೊಳ್ಳಲಾರರು ಎಂಬ ಎಚ್ಚರಿಕೆ ನೀಡಿ. ದೇಶದ ರಕ್ಷಣೆಗಾಗಿ ಯುವ ಪೀಳಿಗೆ ಟೊಂಕ ಕಟ್ಟಿ ನಿಲ್ಲಲು ಕರೆ ನೀಡಿ. ನಿಮ್ಮ ಮದ್ಯೆದಲ್ಲಿ ಇರುವ ಭಯೋತ್ಪಾದಕರನ್ನು, ದೇಶದ್ರೋಹಿಗಳನ್ನು ಗುರ್ತಿಸಿ ನನ್ನ ಕೈಗೆ ನೀಡಿ ಎಂದು ಯುವಕರನ್ನು ಹುರಿದುಂಬಿಸಿ ನಿಮ್ಮ ಜೊತೆ ದೇಶ ರಕ್ಷಣೆಗೆ ಲಕ್ಷಾಂತರ ಯುವಕ-ಯುವತಿಯರು ಕಿಂದರ ಜೋಗಿಗಳಂತೆ ಬರಲು ಸಿದ್ಧರಿದ್ದಾರೆ. ಕ್ಷುಲ್ಲಕ ರಾಜಕಾರಣ, ಓಲೈಸುವ ರಾಜಕಾರಣ ಇನ್ನಾದರೂ ಕೊನೆ ಮಾಡಿ, ಈ ದೇಶ ಉಳಿಸಿ.

ಇತೀ ನಿಮ್ಮವಳೆ,
ಶೋಭಾ

Quotes

We would rather starve thansell our national honor

— Indira Gandhi

Newsletter

Get latest updates of my blog, news, media watch in your email inbox. subscribe to my newsletter