Shobha Karndlaje

Untitled-2

BJP Karnataka

ನನಗೆ ಕ್ಷಮೆಯಿರಲಿ

ಪ್ರಜಾಪ್ರಭುತ್ವದ ದುರಾದೃಷ್ಟ. ರಾಜ್ಯದ ಶಕ್ತಿಕೇಂದ್ರದಲ್ಲಿ ಜನರ ಭಾವನೆಗಳನ್ನು ಸರ್ಕಾರದ ಗಮನಕ್ಕೆ ತಂದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾದ ವಿಧಾನಸೌಧ ಅಕ್ಷರಶಃ ಕುಸ್ತಿಯ ಅಖಾಡವಾಗಿ ಪರಿಣಮಿಸಿದ್ದು ಪ್ರಜಾಪ್ರಭುತ್ವದ ಅಣಕವೇ ಆಗಿತ್ತು. ನಾನಂತು ಈ ಬಾರಿಯ ಅಧಿವೇಶನಕ್ಕೆ ಬಹಳ ತಯಾರಿ ನಡೆಸಿದ್ದೆ.

ಒಂದು ತಿಂಗಳ ಕಾಲ ಅಧಿವೇಶನ ನಡೆಯುತ್ತದೆ, ರಾಜ್ಯದ ಜನರ ಹಲವಾರು ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಬೇಕು. ಸದನದಲ್ಲಿ ಉತ್ತರ ಪಡೆದಾಗ ಮಂತ್ರಿಗಳು, ಅಧಿಕಾರಿಗಳು ಗಂಭೀರವಾಗಿ ತೆಗೆದುಕೊಂಡು ಪರಿಹಾರ ನೀಡುತ್ತಾರೆ, ಹೆಚ್ಚು ಕಾಳಜಿ ವಹಿಸುತ್ತಾರೆ ಅನ್ನುವ ಭಾವನೆಯಿತ್ತು. ಬಹಳ ವರ್ಷಗಳಿಂದ ಸಮಸ್ಯೆಯಾಗಿಯೇ ಉಳಿದಿರುವ ಹಿಜಡಾಗಳ ಸಮಸ್ಯೆ ಬಗ್ಗೆ, ಅದರ ಪರಿಹಾರದ ಬಗ್ಗೆ, ಖಾಸಗಿ ವ್ಯಕ್ತಿ ವಿಧೇಯಕವನ್ನು (Private Member Bill) ಮಂಡಿಸಲು ತಯಾರಿ ಮಾಡಿಕೊಂಡಿದ್ದೆ. ನನ್ನ ದುರಾದೃಷ್ಟನೋ, ಹಿಜಡಾಗಳ ದುರಾದೃಷ್ಟನೋ ಇದಕ್ಕೆ ಅವಕಾಶ ಸಿಗಲೇ ಇಲ್ಲ. ಅಧಿವೇಶನ ಆರಂಭವಾದ ದಿನದಿಂದ ಕೊನೆ ದಿನದ ತನಕ ಒಂದೇ ವಿಷಯ ಗಣಿ, ಗಣಿ, ಗಣಿ. ಕಳೆದ ಎರಡು ವರ್ಷದಲ್ಲಿ ವಿರೋಧಪಕ್ಷಗಳು ವಿಧಾನ ಸಭೆಯ ಒಳಗೆ ಹೊರಗೆ ಮಾತನಾಡಿದ ಏಕೈಕ ವಿಷಯ ಗಣಿ.

ಈ ವಿಷಯನೂ ಬಹಳ ಗಂಭೀರವಾದದ್ದೆ. ದೇಶದ ಸಂಪತ್ತು ವಿದೇಶದ ಪಾಲಾಗುತ್ತಿದೆ, ವಿದೇಶಕ್ಕೆ ಮುಖ್ಯವಾಗಿ ಚೀನಾಕ್ಕೆ ಮಣ್ಣು ಮಾರುವ ದಂಧೆ ದಶಕಗಳಿಂದ ನಡೆಯುತ್ತಿದೆ. ಯಾವುದೇ ವ್ಯಕ್ತಿ ಮಣ್ಣನ್ನು ಯಾವಾಗ ಮಾರಿಕೊಳ್ಳುತ್ತಾನೆ ಎಂಬುದು ನಮಗೆ ಗೊತ್ತು.

ಹಳ್ಳಿಯ ರೈತನ ಒಂದು ಎಕರೆ ಜಮೀನಿರಲಿ, ನಗರದ 30″x20″ ಸೈಟಿರಲಿ ಅದನ್ನು ಮಾರಿಕೊಳ್ಳುವುದು ದಾರಿದ್ಯ ಬಂದಾಗ. ಸಮಸ್ಯೆ ಕುತ್ತಿಗೆಗೆ ಬಂದಾಗ. ಇದು ಬಿಟ್ಟು ಬೇರೆ ದಾರಿನೇ ಇಲ್ಲ, ಎಲ್ಲಾ ದಾರಿಗಳು ಮುಚ್ಚಿಹೋಗಿವೆ ಅನ್ನುವ ಸ್ಥಿತಿಯಿದ್ದಾಗ. ವ್ಯಕ್ತಿಗಿಂತ ರಾಜ್ಯ, ದೇಶ ಬಹಳ ದೊಡ್ಡದು. ನಮ್ಮ ವೈರಿ ದೇಶ ಚೀನಾಕ್ಕೆ ಮಣ್ಣು ಮಾರಿ ಜೀವನ ಮಾಡಬೇಕಾದ ದಾರಿದ್ರ್ಯ ನಮಗೆ ಬಂದಿದೆಯಾ? ಬಹಳ ದೊಡ್ಡ ಪ್ರಶ್ನೆ. ಚೀನಾದಲ್ಲಿ ಕಬ್ಭಣದ ಅದಿರು ಇಲ್ಲವೆಂದಲ್ಲ. ಸಾಕಷ್ಟಿದೆ. ಆದರೆ ಅವರು ಬುದ್ದಿವಂತರು. ಅವರ ಅದಿರನ್ನು ಅವರು ಮುಟ್ಟಿಲ್ಲ. ಕಾಪಾಡಿಕೊಂಡಿದ್ದಾರೆ. ಭಾರತದಿಂದ ಮಣ್ಣು ತರಿಸಿಕೊಂಡು ಶೇಖರಿಸಿ ಇಟ್ಟುಕೊಳ್ಳುತ್ತಿದ್ದಾರೆ. ಇಲ್ಲಿಂದ ಹೋದ ಅದಿರಿನ ಗುಡ್ಡ ಗುಡ್ಡಗಳೇ ಅಲ್ಲಿವೆ. ನಮ್ಮದೇ ಕಬ್ಬಿಣದ ಅದಿರಿನಿಂದ ಉಕ್ಕು ತಯಾರಿಸಿ, ಅದರಿಂದಲೇ ಶಸ್ತ್ರಾಸ್ತ್ರ ತಯಾರಿಸಿ ನಮ್ಮ ದೇಶದ ಮೇಲೇನೇ ಪ್ರಯೋಗ ಮಾಡುವ ಅವರನ್ನು ಬುದ್ಧಿವಂತರೆನ್ನದೆ ಇನ್ನೇನು ಹೇಳುವುದು?

ಇಂದಿನ ನಮ್ಮ ರಾಜ್ಯದ ಮತ್ತು ದೇಶದ ಸ್ಥಿತಿ ನೋಡಿದರೆ ನಾವು ಇದ್ದ ಅದಿರನ್ನೆಲ್ಲಾ ಖಾಲಿ ಮಾಡಿಕೊಂಡು ಮುಂದಿನ ನಮ್ಮ ಪೀಳಿಗೆಗೆ ಚೀನಾದಿಂದ ಅದಿರನ್ನು ಆಮದು ಮಾಡಿಕೊಳ್ಳುವ ಪರಿಸ್ಥಿತಿ ತಂದಿಡುತ್ತೇವೇನೋ ಅನ್ನಿಸುತ್ತಿದೆ. ಯಾವುದೇ ದೇಶಕ್ಕೆ ಇಂತಹ ಸ್ಥಿತಿ ಬರಬಾರದು. ಸ್ವಾತಂತ್ರ್ಯ ಬಂದು 62 ವರ್ಷಗಳಲ್ಲಿ ಮಣ್ಣು ಮಾರಿ ಬದುಕುವ ದಿವಾಳಿತನ ನಮಗೆ ಬರಬಾರದಾಗಿತ್ತು. ನಮ್ಮ ದೇಶದ ದುರಾದೃಷ್ಟ ಇದು. ದೇಶವನ್ನಾಳುವ ಜನರಿಗೆ ದೂರದೃಷ್ಟಿಯ ಕೊರತೆ ಇದ್ದರೆ ಎಂತಹ ಅನಾಹುತ ನಡೆಯುತ್ತದೆ ಎನ್ನುವುದಕ್ಕೆ ಇದು ಜೀವಂತ ಉದಾಹರಣೆ. ಹೋಗಲಿ ದೇಶದ, ರಾಜ್ಯದ ಬೊಕ್ಕಸಕ್ಕೆ ಇದರಿಂದ ಲಾಭವಿದೆಯಾ ಅದೂ ಇಲ್ಲ. ಯಾರೋ ಖಾಸಗಿ ವ್ಯಕ್ತಿಗಳು ಐಷಾರಾಮಿ ಜೀವನ ನಡೆಸಲು, ಅಧಿಕಾರ ಚಲಾಯಿಸಲು ದೇಶದ ಸಂಪತ್ತನ್ನು ಕೊಳ್ಳೆಹೊಡೆಯಲು ಬಿಡುವುದು ಎಷ್ಟು ಸರಿ ಅನ್ನುವುದನ್ನು ಈಗಲಾದರೂ ಅಧಿಕಾರಸ್ಥರು ಪಕ್ಷಬೇಧ ಮರೆತು ಯೋಚನೆ ಮಾಡಬೇಕು.

ಇಂತಹ ಗಂಭೀರವಾದ ವಿಚಾರದ ಬಗ್ಗೆ ಪಕ್ಷಬೇಧ ಮರೆತು ದೇಶದ ಸಂಪತ್ತನ್ನು ಉಳಿಸುವ ಸಲುವಾಗಿ ಹೋರಾಟ, ಧರಣಿ, ಕೂಗಾಟ, ಚೀರಾಟ ನಡೆಸಿದ್ದರೆ ಶಹಬ್ಬಾಸ್ ಅನ್ನಬಹುದಾಗಿತ್ತು. ಆದರೆ ಕಳೆದ 15 ದಿನಗಳ ಅಧೀವೇಶನದಲ್ಲಿ ಇದು ಆಗಿದೆಯೇ? ಜನರಿಂದ ಆಯ್ಕೆಯಾಗಿ ಹೋದ ಜನಪ್ರತಿನಿಧಿಗಳು ವಿಧಾನಸೌಧದಲ್ಲಿ ಸಾಧಿಸಿದ್ದೇನು? ರಾಜಕಾರಣ ಮಾಡಲು ವಿಧಾನ ಸೌಧವೇ ಯಾಕೆ ಬೇಕು. ಹೋರಾಟ ಮಾಡಲು, ಪ್ರತಿಭಟನೆ ಮಾಡಲು ವಿಶಾಲವಾದ ಕರ್ನಾಟಕ ಇದೆ. ವಿಧಾನ ಸೌಧದ ಹೊರಗೆ ಆರೂವರೆ ಕೋಟಿ ಜನರಿದ್ದಾರೆ. ಹೀಗಿರುವ ಸಮಸ್ಯೆ ಅರಿವು ಅವರೆಲ್ಲರಿಗೂ ಇದೆ. ಇದಕ್ಕೆ ಶಾಸನ ರೂಪಿಸಿ ಪರಿಹಾರ ಕಂಡುಕೊಳ್ಳಲು ತಾನೇ ನಾವು ಆಯ್ಕೆಯಾಗಿರುವುದು. ಇದೇನಾದರೂ ಆಯಿತೇ?

2004 ರಿಂದ ನಾನು ವಿಧಾನ ಪರಿಷತ್‌ನಲ್ಲಿದ್ದೆ. ಒಂದಷ್ಟು ಗಂಭೀರವಾದ ಚರ್ಚೆ ಅಲ್ಲಿ ನಡೆಯುತ್ತಿತ್ತು, ಮೊದಲ ಬಾರಿಗೆ ವಿಧಾನ ಸಭೆಗೆ ಆಯ್ಕೆಯಾದೆ. ಬಹಳ ಹುರುಪಿತ್ತು. ಜನರ ಸಮಸ್ಯೆಗಳನ್ನು ನೇರವಾಗಿ ಅರಿತು ಪರಿಹಾರ ಕೊಡಿಸಲು ಒಳ್ಳೆಯ ಅವಕಾಶ ಅಂದುಕೊಂಡೆ. ಆರಂಭದಲ್ಲೇ ಮಂತ್ರಿಯಾದೆ. ಮಂತ್ರಿಗಿರಿ ಇನ್ನೂ ಹೊಸತು. ವಿಧಾನ ಸಭೆಯಲ್ಲಿ ನನ್ನ ಖಾತೆಯನ್ನು ನಿರ್ವಹಿಸಲು ಸಿಗಬೇಕಾದ ಒಳ್ಳೆಯ ಸಲಹೆಗಳು, ಮಾರ್ಗದರ್ಶನ ಸದಸ್ಯರಿಂದ ಸಿಗಲಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಏನಾದರೂ ಬದಲಾವಣೆ ತರಲೇಬೇಕು ಅನ್ನುವ ಉತ್ಕಟ ಇಚ್ಛೆ ಮಾನ್ಯ ಮುಖ್ಯಮಂತ್ರಿಗಳಿಗೆ ಮತ್ತು ನನಗೆ ಇದ್ದಿದರಿಂದ ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ ಸಲುವಾಗಿಯೇ 3 ದಿನ ವಿಶೇಷ ಅಧಿವೇಶನ ನಡೆಯಿತು. ಅಲ್ಲೂ ರಾಜಕಾರಣವೇ ಹೊರತು ನಿರೀಕ್ಷಿಸಿದ ಸಲಹೆ ಆಗಲಿ, ವಿರೋಧ ಪಕ್ಷದಿಂದ ಗಂಭೀರವಾದ ಚರ್ಚೆಯಾಗಲೀ ಆಗಲೇ ಇಲ್ಲ. ಆದರೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಬಗ್ಗೆ ತಜ್ಞರಿಂದ, ಹಿರಿಯರಿಂದ, ಮಾಧ್ಯಮದ ಸ್ನೇಹಿತರಿಂದ ಸಲಹೆ ಪಡೆದು ಒಂದಷ್ಟು ಒಳ್ಳೆಯ ನಿರ್ಧಾರಗಳನ್ನು ಮಾಡಿದ್ದೆ. ಅನೀರಿಕ್ಷಿತವಾಗಿ ಅಧಿಕಾರ ಕಳೆದುಕೊಂಡೆ. ಕಳೆದ ಬಾರಿಯ ಅಲ್ಫಾವಧಿಯ ಅಧಿವೇಶನದಲ್ಲಿ ಒಬ್ಬ ಶಾಸಕಿಯಾಗಿ ಎಂಡೋಸಲ್ಫಾನ್ ಸಮಸ್ಯೆಯ ಬಗ್ಗೆ ಸದನದಲ್ಲಿ ಮತಾನಾಡುವ ಅವಕಾಶ ಸಿಕ್ಕಿತು. ಕಳೆದ 15 ವರ್ಷಗಳ ರೈತರ ಹೋರಾಟಕ್ಕೆ ಕೊಂಚ ಮಟ್ಟಿನ ಪರಿಹಾರವನ್ನು ಸರ್ಕಾರ ಕೊಟ್ಟಿತು. ಇದರಿಂದ ಉತ್ತೇಜಿತಳಾದ ನಾನು ಈ ಬಾರಿ ದೀರ್ಘಾವಧಿಯ ಅಧೀವೇಶನದಲ್ಲಿ ಬಹಳಷ್ಟು ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಬಹುದು ಅನ್ನುವ ಹುರುಪಿತ್ತು. ತಯಾರಿನೂ ಆಗಿತ್ತು. ಶಾಸಕಿಯಾಗಿ ಎಷ್ಟೊಂದನ್ನು ಮಾಡಬಹುದು ಅನ್ನಿಸಿತ್ತು. ಆದರೆ ಇವತ್ತು ಅಧಿವೇಶನ ಅನಿರ್ಧಿಷ್ಟಾವದಿ ಮುಂದೆ ಹೋದಾಗ ನಿರಾಶೆಯಾಯಿತು. ನೋವಾಯಿತು. ಕೆಲವನ್ನು ಜನರಿಗೆ ಭರವಸೆ ಕೊಟ್ಟಿದ್ದೆ. ನಿಮ್ಮ ಸಮಸ್ಯೆಗಳನ್ನು ಅಧಿವೇಶನದಲ್ಲಿ ಸರ್ಕಾರದ ಗಮನಕ್ಕೆ ತರುತ್ತೇನೆ ಎಂಬುದಾಗಿ. ಮುಖ್ಯವಾಗಿ ವಿದ್ಯುತ್ತಿನ ಕೊರತೆ, ರೈತರಿಗೆ ಖಾಸಗಿ ಕಂಪನಿಗಳು ಗೊಬ್ಬರ ಮತ್ತು ಬಿತ್ತನೆ ಬೀಜದಲ್ಲಿ ಮಾಡುತ್ತಿರುವ ಮೋಸ, ದಿನಗೂಲಿ ನೌಕರರು, ಗುತ್ತಿಗೆ ಅಧಾರದ ಮೇಲೆ ಕೆಲಸ ಮಾಡುತ್ತಿರುವ ನೌಕರರ ಸಮಸ್ಯೆಗಳು, ಶಿಕ್ಷಣ ಕ್ಷೇತ್ರದಲ್ಲಿನ ಸಮಸ್ಯೆಗಳು, ನೆರೆಪರಿಹಾರದ ದುರುಪಯೋಗ, ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯದ ಬಗ್ಗೆ ಮಾತನಾಡಬೇಕು ಎಂಬುದನ್ನು ಗುರುತು ಮಾಡಿಕೊಂಡಿದ್ದೆ. ಆದರೆ ಸದನ ಗೊಂದಲ, ಗದ್ದಲದ ನಡುವೆ ಆರ್ಧದಲ್ಲೇ ಮೊಟಕಾಯಿತು.

ರಾಜ್ಯದ ಸಮಸ್ಯೆ ಅಂದ್ರೆ ಕೇವಲ ಗಣಿ ಮಾತ್ರವೇ? ಬಳ್ಳಾರಿ ಮಾತ್ರವೇ? ರಾಜ್ಯದಲ್ಲಿ ಇನ್ನೂ ಹಲವಾರು ಸಮಸ್ಯೆಗಳಿದ್ದವಲ್ಲ? ರಾಜ್ಯದಲ್ಲಿ ಬಳ್ಳಾರಿಯನ್ನು ಹೊರತುಪಡಿಸಿ ಹಲವಾರು ಜಿಲ್ಲೆಗಳಿವೆಯಲ್ಲಾ? ಅಲ್ಲಿರುವ ಜನರ ಸಮಸ್ಯೆ ಬಗ್ಗೆ ಯಾರು ಮಾತನಾಡಬೇಕು. ಒಂದು ಕೋಟಿ ನೆರೆ ಸಂತ್ರಸ್ತರ ಬಗ್ಗೆ ಯಾರು ಹೇಳಬೇಕು. ಬೆಳಗಾವಿ ಗಡಿ ವಿಚಾರದಲ್ಲಿ ಮಹಾರಾಷ್ಟ್ರದ ಉದ್ಘಟತನಕ್ಕೆ ಕಡಿವಾಣ ಹಾಕುವುದರ ಬಗ್ಗೆ ಯಾರು ಪ್ರತಿಭಟಿಸಬೇಕು? ಮೆಲೆ ತಿಳಿಸಿದ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತರಲು ತಾನೆ ನಮ್ಮನ್ನು ಅಯ್ಕೆಮಾಡಿದ್ದು. ಕೆಲವರು ಕಾಂಗ್ರೆಸ್ ನಿಂದ, ಕೆಲವರು ಜೆ.ಡಿ.ಎಸ್. ನಿಂದ, ಬಹು ಸಂಖ್ಯೆಯಲ್ಲಿ ಬಿ.ಜೆ.ಪಿ. ಯಿಂದ ಆಯ್ಕೆಯಾಗಿದ್ದೇವೆ. ನಮ್ಮ ಪ್ರಣಾಳಿಕೆ, ವಿಚಾರಧಾರೆ, ಚಿಹ್ನೆ ಬೇರೆ ಬೇರೆಯಿದೆ. ಆದರೆ ಎಲ್ಲಾರ ಉದ್ದೇಶ ರಾಜ್ಯದ, ರಾಜ್ಯದ ಜನರ ಅಭಿವೃದ್ಧಿ ತಾನೇ? ನಾವೆಲ್ಲರೂ ನಮ್ಮ ಕ್ಷೇತ್ರದಲ್ಲಿ ಮತ್ತು ರಾಜ್ಯದಲ್ಲಿ ಬಹಳ ಭರವಸೆ ಕೊಟ್ಟು ಆಯ್ಕೆಯಾಗಿದ್ದೇವೆ. ಭರವಸೆ ಕೊಡುವುದರಲ್ಲಿ ಮತ್ತು ಅಭಿವೃದ್ಧಿ ವಿಚಾರದಲ್ಲಿ ಯಾವುದೇ ಪಕ್ಷದ ಶಾಸಕರಿಗೆ ವ್ಯತ್ಯಾಸವಿಲ್ಲ. ವಿಧಾನಸಭೆಯ ಒಳಗೆ, ಹೊರಗೆ ಆಡಳಿತ ಪಕ್ಷಕ್ಕೆ ಎಷ್ಟು ಜವಾಬ್ದಾರಿಗಳಿವೆಯೋ ಅಷ್ಟೇ ವಿರೋಧ ಪಕ್ಷಕ್ಕೂ ಇದೆ. ರಾಜಕೀಯ ಹೋರಾಟ, ಮೇಲಾಟ ಎಲ್ಲಾವೂ ಚುನಾವಣೆ ತನಕ ಮಾತ್ರ. ಚುನಾವಣೆಗಳಲ್ಲಿ ಗೆದ್ದ ಮೇಲೆ ಎಲ್ಲಾ ಶಾಸಕರು ಸಮಾನರು. ಇದೇ ಪ್ರಜಾಪ್ರಭುತ್ವದ ದೊಡ್ಡಸ್ತಿಕೆ ವಿಶೇಷತೆ. ಆದರೆ ಇದಕ್ಕೆ ಪೂರಕವಾಗಿ ನಮ್ಮ ನಡವಳಿಕೆ ಇದೆಯೇ? ನಮ್ಮ ಪರವಾಗಿ ಮಾತಾನಾಡಲು ವಿಧಾನಸೌಧಕ್ಕೆ ಕಳುಹಿಸಿದ್ದೇವೆ. ನೀವು ಅಲ್ಲೇನು ಮಾಡಿದ್ದೀರಿ ಎಂದು ಜನ ಕೇಳಿದರೆ ಏನು ಉತ್ತರ ಹೇಳೊದು?

ವಿಧಾನಸೌಧ ಪವಿತ್ರ ದೇವಸ್ಥಾನ. ಕಾನೂನುಗಳನ್ನು ರೂಪಿಸಬಲ್ಲ, ಜನರ ಮಾನ, ಪ್ರಾಣವನ್ನು ಕಾಪಾಡುವ ಶಾಸನಗಳಾಗುವ ದೇಗುಲ. ಗುಡಿಯಲ್ಲಿರುವ ಕಲ್ಲು ದೇವರು ವರ ಕೊಡದೆ ಇರಬಹುದು. ಆದರೆ ಈ ಪವಿತ್ರ ದೇಗುಲದಲ್ಲಿರುವ ಜನಪ್ರತಿನಿಧಿಗಳನ್ನು ಪ್ರತ್ಯಕ್ಷ ದೇವರೆಂದು ಕಾಣುವ ಕಾಲವೊಂದಿತ್ತು. ದೇವರ ಪ್ರತಿರೂಪ ರಾಜ, ರಾಜನ ಪ್ರತಿರೂಪ ಜನಪ್ರತಿನಿಧಿಗಳು ಎಂಬ ಗೌರವ, ಆದರಗಳಿದ್ದವು. ಈಗ ಆ ಭಾವನೆಗಳು ಎಲ್ಲಾ ಹೋದವು. ಆ ಗೌರವವನ್ನು ಪಡೆಯುವ ಆರ್ಹತೆ ಹೊಂದಿದ್ದೇವೆಯೆ? ದೇವರನ್ನು ನಾವು ಕಂಡಿಲ್ಲ. ಅವನು ಕೈಗೆ ಸಿಗಲ್ಲ. ರಾಜನ ಆಡಳಿತ ಇಲ್ಲ. ಪ್ರಜಾಪ್ರಭುತ್ವದ ಈ ಕಾಲದಲ್ಲಿ ಜನರು ನಮ್ಮ ಮೇಲೆ ಅನಿವಾರ್ಯವಾಗಿ ವಿಶ್ವಾಸ ಇಡಬೇಕು. ನಾವೇ ಜನರ ಭಾವನೆಗಳಿಗೆ ವಿರುದ್ಧವಾಗಿ ನಡೆದುಕೊಂಡರೆ ಜನರು ಯಾರಲ್ಲಿ ವಿಶ್ವಾಸವಿಡಬೇಕು? ಯಾರಲ್ಲಿ ತಮ್ಮ ದುಃಖ ದುಮ್ಮಾನಗಳನ್ನು ಹೇಳಿಕೊಳ್ಳಬೇಕು. ಅವರ ಅಕ್ರೋಶಗಳು ಒಂದು ದಿನ ಅರಾಜಕತೆಗೆ, ಕ್ರಾಂತಿಗೆ ಕಾರಣವಾದರೆ ತಡೆಯುವವರು ಯಾರು? ಹೀಗೆ ಹಲವಾರು ಪ್ರಶ್ನೆಗಳು ಈ ಬಾರಿಯ ಕಲಾಪದಲ್ಲಿ ಭಾಗವಹಿಸಿದ ಮೇಲೆ ನನ್ನ ಮನಸ್ಸಲ್ಲಿ ಹಾದು ಹೋದವು.

ಜನರ ಬಗ್ಗೆ ಚರ್ಚೆಯಾಗಬೇಕಾದ, ಪ್ರಮುಖವಾದ ಶಾಸನಗಳಿಗೆ ಮುದ್ರೆಯೊತ್ತಬೇಕಾದ ವಿಧಾನಸೌಧ ಕುಸ್ತಿಯ ಅಖಾಡವಾಯಿತು. ಬಿರಿಯಾನಿ ತಿನ್ನುವ ಹೋಟೆಲ್ ಆಯಿತು. ಹಾಡುಹಾಡುವ ಕಲಾಮಂದಿರವಾಯಿತು.

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮುಖ್ಯಮಂತ್ರಿಗಳಷ್ಟೇ ಹಕ್ಕು, ಗೌರವವುಳ್ಳ ವಿರೋಧ ಪಕ್ಷದ ನಾಯಕರು ಪವಿತ್ರವಾದ ಸಭಾಧ್ಯಕ್ಷರ ಪೀಠದ ಕಡೆಗೆ ಥೂ ಎಂದು ಉಗುಳು ಉಗಿದಾಗ ನನ್ನ ಕಣ್ಣಂಚಿನಲ್ಲಿ ನೀರು ಬಂದಿತ್ತು. 62 ವರ್ಷಗಳ ಹಿಂದೆ ಇದಕ್ಕಾಗಿ ಏನೋ ನಮ್ಮ ಹಿರಿಯರು ಪ್ರಾಣ ತ್ಯಾಗ ಮಾಡಿ ಸ್ವಾತಂತ್ರ್ಯ ತಂದು ಪ್ರಜಾಪ್ರಭುತ್ವದ ವ್ಯವಸ್ಥೆ ತಂದಿದ್ದಾರಾ? ಅವರು ಕಂಡ ಕನಸ್ಸು ನುಚ್ಚು ನೂರು ಮಡುತ್ತಿದ್ದೆವೆಲ್ಲಾ? ಹೃದಯ ಹಿಂಡಿದಂತಾಯಿತು. ನೋವಾಯಿತು. ಆವತ್ತಿನಿಂದ ಯಾಕೋ ಮನಸ್ಸಿಗೆ ಗರಬಡಿದಂತಾಗಿದೆ. ಅಧಿವೇಶನ ನಡೆಯುವುದೇ ವರ್ಷದಲ್ಲಿ 40 ರಿಂದ 60 ದಿನ. ವರ್ಷದ ಉಳಿದ ಎಲ್ಲಾ ದಿನಗಳಲ್ಲಿ ಹೋರಾಟಕ್ಕೆ ಅವಕಾಶ ಇದ್ದೇ ಇದೆ. ಆದರೆ ಈ ಬಾರಿಯ ಅಧಿವೇಶನದಂತಹ ಅಧಿವೇಶನ ಇನ್ನೂ ನಡೆಯದಿರಲೆಂದೇ ದೇವರಲ್ಲಿ ಕಳಕಳಿಯ ಪ್ರಾರ್ಥನೆ. ದೇಶದಲ್ಲಿ ಪ್ರಜಾಪ್ರಭುತ್ವ ದುರ್ಬಲಗೊಂಡರೆ ವ್ಯವಸ್ಥೆ ದುರ್ಬಲಗೊಳ್ಳುತ್ತದೆ. ವ್ಯವಸ್ಥೆ ದುರ್ಬಲಗೊಂಡರೆ ದೇಶದ್ರೋಹಿಗಳು, ಸಮಾಜಘಾತುಕರು ಎಚ್ಚರಗೊಳ್ಳುತ್ತಾರೆ, ದೇಶದಲ್ಲಿ ಅರಾಜಕತೆ, ಅವ್ಯವಸ್ಥೆ ಹೆಚ್ಚಾಗುತ್ತದೆ. ಇದರ ಲಾಭವನ್ನು ವಿದೇಶೀಯರು ಪಡೆಯುತ್ತಾರೆ. ನಮ್ಮ ಪ್ರಜಾಪ್ರಭುತ್ವ ದುರ್ಬಲಗೊಂಡರೆ ದೇಶ ದುರ್ಬಲವಾಗುತ್ತದೆ. ಜಗತ್ತು ನಮ್ಮನ್ನು ಹಗುರವಾಗಿ ತೆಗೆದುಕೊಳ್ಳುತ್ತದೆ. ಕಳೆದುಕೊಂಡು ಉಳಿದ ಭಾರತವನ್ನು ಉಳಿಸಬೇಕಾದ, ರಕ್ಷಿಸಬೇಕಾದ, ಅಭಿವೃದ್ಧಿ ಪಡಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಹೊಣೆಗಾರಿಕೆ, ಕರ್ತವ್ಯ. ಸಾಕಷ್ಟು ಜಗಳವಾಡೋಣ ಆದರೆ ಅದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗದಿರಲಿ. ನಮ್ಮ ಪಕ್ಷ, ಪಂಗಡ, ಹೋರಾಟ, ಪ್ರತಿಭಟನೆ, ಪರ, ವಿರೋದ ಇವೆಲ್ಲದಕ್ಕಿಂತ ಜನರು, ಅವರ ಭಾವನೆ, ದೇಶ ಅದರ ಗೌರವ ಮುಖ್ಯ. ನಮ್ಮನ್ನು ಆರಿಸಿದ ಜನ ಹೆಮ್ಮೆಪಡುವ ರೀತಿಯಲ್ಲಿ ಮುಂದಿನ ಬಾರಿ ವರ್ತಿಸೋಣ. ಕರ್ನಾಟಕ ಮಾತೆ, ಭಾರತಮಾತೆ ನಮ್ಮನ್ನು ಈ ರೀತಿಯಲ್ಲಿ ಹರಸಲಿ.

ನನ್ನ ಪ್ರೀತಿಯ ನಾಗರಿಕರೇ, ಈ ಬಾರಿ ನಿಮ್ಮ ಸಮಸ್ಯೆಗಳನ್ನು ಸದನದಲ್ಲಿ ಪ್ರಸ್ತಾಪ ಮಾಡಲಾರದಕ್ಕೆ ನನ್ನನ್ನು ಕ್ಷಮಿಸಿ.

ಇತೀ ನಿಮ್ಮವಳೆ,
ಶೋಭಾ ಕರಂದ್ಲಾಜೆ

Quotes

You have to grow from theinside out. None can teach you, none can make you spiritual. There is noother teacher but your own soul.

— Swami Vivekananda

Newsletter

Get latest updates of my blog, news, media watch in your email inbox. subscribe to my newsletter