Shobha Karndlaje

Untitled-2

BJP Karnataka

ಗೋಹತ್ಯೆ ನಿಷೇಧ ಕಾಯಿದೆ ಬೇಕು-ಬೇಡ

ಅಹಿಂಸಾವಾದಿ ಮಹಾತ್ಮ ಗಾಂಧೀಜಿಯವರು  ಸ್ವಾತಂತ್ರಕ್ಕಾಗಿ ಹೋರಾಟ ಮಾಡುತ್ತಾ ದೇಶದಲ್ಲಿರುವ ದುಷ್ಟ ಪದ್ದತಿಗಳ ಬಗ್ಗೆ ಜನಮಾನಸದಲ್ಲಿ ಜನಜಾಗೃತಿ ಮೂಡಿಸಿದರು. ಅಸ್ಪೃಶ್ಯತೆ, ಬಾಲ್ಯವಿವಾಹ, ಮಹಿಳೆಯರ ಮೇಲಿನ ದೌರ್ಜನ್ಯ, ಗೋಹತ್ಯೆ ಇತ್ಯಾದಿಗಳ ಬಗ್ಗೆ ಜನರಲ್ಲಿ ಹೊರಾಡುವ ಮನೋಭಾವವನ್ನು ಬೆಳೆಸಿದರು. ಎಲ್ಲರ ಭಾವನೆ ಮತ್ತು ಹೋರಾಟದ ಕಾರಣಕ್ಕಾಗಿ ಸಮಾಜದ ಆಗಿನ ಈ ಎಲ್ಲಾ ಸ್ಥಿತಿಗತಿಗಳನ್ನು ಡಾ|| ಬಾಬಾ ಸಾಹೇಬ ಅಂಬೇಡ್ಕರ್ ಸಂವಿಧಾನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಯಿತು.

ಸ್ವಾತಂತ್ರ್ಯ ಬಂದು 62 ವರ್ಷ ಕಳೆದು ಹೊಗಿದೆ. ಗಾಂಧೀಜಿಯವರ ಕನಸು, ಸಂವಿಧಾನದ ಆಶಯಗಳನ್ನು ಜಾರಿಗೊಳಿಸಲು ನಮಗೆ ಈ ಆರು ದಶಕಗಳಲ್ಲಿ ಸಾದ್ಯವಾಗಿದೆಯಾ? ಭಾರತಿಯರನ್ನು ಕಾಡುವ ಪ್ರಶ್ನೆ ಇದು.

ಇವತ್ತು ಬಹು ಚರ್ಚೆಯಲ್ಲಿರುವ ಗೋಹತ್ಯೆ ನಿಷೇಧದ ಕಾನೂನನ್ನು 1964 ರಲ್ಲಿ ಲೋಕಸಭೆಯಲ್ಲಿ ಮಂಡಿಸಲಾಯಿತು. ಭಾರತದ ಸಂಸತ್ತಿನಲ್ಲಿ ಗೋಹತ್ಯೆಯನ್ನು ವಿರೋಧಿಸಿ ಹಲವಾರು ಬಾರಿ 1979, 1985, 1990, 1994, 1996, 1999, 2000 ಗಳಂದು ಖಾಸಗಿ ಮಸೂದೆಯನ್ನು ಮಂಡಿಸಲಾಯಿತು.

1982 ರಲ್ಲಿ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು ಎಲ್ಲಾ ರಾಜ್ಯಗಳಿಗೂ ಪತ್ರ ಬರೆದು ಗೋಹತ್ಯೆ ನಿಷೇಧಿಸುವಂತೆ ಸೂಚನೆ ನೀಡಿದ್ದರು. ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತಿಸ್‌ಗಡ ರಾಜ್ಯಗಳಲ್ಲಿ ಸಂಪೂರ್ಣ ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತರಲಾಗಿದೆ. ಕ್ಯೂಬಾ, ಇರಾನ್ ನಂತಹ ದೇಶದಲ್ಲೂ ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದೆ.

ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ತನ್ನದೆ ಆದ ಪೂಜ್ಯ ಸ್ಥಾನವಿದೆ. ಭಾರತೀಯರು ಕಲ್ಲು, ಮರ, ಪ್ರಾಣಿ, ಪಶು, ಪಕ್ಷಿ, ನೀರು, ಬೆಟ್ಟ, ಗುಡ್ಡ ಎಲ್ಲಾದರಲ್ಲೂ ದೇವರನ್ನು ಕಾಣುವಂತವರು.  ಸಮಾಜಕ್ಕೆ ಯಾವುದು ಪೂರಕವಾಗುತ್ತೋ, ಸಮಾಜಕ್ಕೆ ಉಪಕಾರ ಮಾಡುತ್ತೋ ಅದೆಲ್ಲವೂ ಪೂಜನೀಯ ಎಂದು ನಂಬಿದವರು. ಹೆತ್ತ ತಾಯಿ ಒಂದು ವರ್ಷ ಹಾಲುಣಿಸಿದರೆ ಗೋಮಾತೆ ಜೀವನ ಪೂರ್ತಿ ಹಾಲು ಉಣಿಸುತ್ತಾಳೆ.

ತಾಯಿ ಸತ್ತ ಮೇಲೆ ಮಗುವಿಗೆ ಗೋಮಾತೆಯ ಹಾಲಿನಿಂದ ಪ್ರಾಣವನ್ನು ಉಳಿಸುತ್ತೇವೆ, ಬೆಳೆಸುತ್ತೇವೆ. ವಯಸ್ಸಾದ ಮೇಲೆ ನಿರುಪಯುಕ್ತ, ದುಡಿಯಲು ಶಕ್ತಿಯಿಲ್ಲವೆಂದು ತಾಯಿಯನ್ನು ಕೊಲ್ಲುವುದಿಲ್ಲ. ಎಲ್ಲಾ ದೇಶದಲ್ಲೂ ತಾಯಿಯನ್ನು ಪೂಜ್ಯ ಭಾವನೆಯಿಂದ ಕಾಣುತ್ತೇವೆ, ಸಾಯುವ ತನಕ ಸಾಕುತ್ತೇವೆ. ಅದೇ ಭಾವನೆ ತಾಯಿ ಸಮಾನಳಾದ ಗೋವಿಗೆ ಯಾಕಿಲ್ಲ?

ಭಾರತ ಕೃಷಿಕರ ದೇಶ. ಬಹುಭಾಗ ಜನರು ಜಾತಿ, ಮತದ ಎಲ್ಲೆಯಿಲ್ಲದೆ ಕೃಷಿಗೆ ಅವಲಂಬಿತವಾಗಿದ್ದೇವೆ. ಕೃಷಿಯ ಮೂಲಾಧಾರವೇ ಗೋವು. ಗೋ ಆಧಾರಿತ ಕೃಷಿ, ಕೃಷಿಕನ ಅವಿಬಾಜ್ಯ ಅಂಗ. ಹಿಂದೂ, ಮುಸ್ಲಿಂ, ಕ್ರೈಸ್ತ ಯಾರೇ ಆಗಲಿ ಕೃಷಿಕನಾದವ ತನ್ನ ಮನೆಯಲ್ಲೆ ಸಾಕಿದ ಗೋವನ್ನು ರಾತ್ರಿ ಬೆಳಗಾಗುವುದರೊಳಗೆ ಕೊಂದು ಗೋಮಾಂಸದ ಅಡಿಗೆ ಮಾಡಿ ಉಣ್ಣಲು ಇಷ್ಟಪಡುವುದಿಲ್ಲ. ಮನಸ್ಸು ಒಪ್ಪುವುದಿಲ್ಲ.

ಅಲ್ಪ ಸಂಖ್ಯಾತರು, ಪರಿಶಿಷ್ಟರು ಗೋಮಾಂಸ ಭಕ್ಷಣೆ ಮಾಡುತ್ತಾರೆ. ಅದಕ್ಕಾಗಿ ಗೋಹತ್ಯೆ ನಿಷೇಧ ಜಾರಿಗೆ ತಂದ ಈ ಸರ್ಕಾರ ಅಲ್ಪ ಸಂಖ್ಯಾತರ, ಪರಿಶಿಷ್ಟರ ವಿರೋಧಿ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಮುಸಲ್ಮಾನರಾಗಲಿ, ಪರಿಶಿಷ್ಟರಾಗಲಿ ಇತಿಹಾಸದಿಂದ ಅಥವಾ ಸಾವಿರಾರು ವರ್ಷಗಳಿಂದ ಗೋಮಾಂಸ ತಿನ್ನುತ್ತಿದ್ದರು ಎನ್ನುವುದಕ್ಕೆ ಯಾವುದೇ ಆಧಾರವಿಲ್ಲ. ಕಾಲ ಕ್ರಮದಲ್ಲಿ ಇದು ಸೇರಿಕೊಂಡಿದೆ. ಅದರಲ್ಲೂ ಪರಿಶಿಷ್ಟ ಜಾತಿಯ ನಮ್ಮ ಬಂಧುಗಳು
ಗೋವನ್ನು ಎಂದೂ ಹತ್ಯೆ ಮಾಡಿದ ಬಗ್ಗೆ ಉಲ್ಲೇಖವಿಲ್ಲ. ಮೊಗಲ್ ಸಾಮ್ರಾಜ್ಯದ ಸಂಸ್ಥಾಪಕ ಬಾಬರ್ ತನ್ನ ಮಗ ಹುಮಾಯೂನನಿಗೆ ಬರೆದ ಪತ್ರದಲ್ಲಿ ಗೋವಧೆ ಎಂದಿಗೂ ಮಾಡಬಾರದು ಎಂಬುದನ್ನು ಉಲ್ಲೇಖಿಸುತ್ತಾರೆ. ಮೊಗಲ್ ದೊರೆ ಅಕ್ಬರ್ ತನ್ನ ಸಾಮ್ರಾಜ್ಯದಲ್ಲಿ ಗೋಹತ್ಯೆಯನ್ನು ನಿಷೇಧ ಮಾಡಿದ್ದರು. ಈ ಬಗ್ಗೆ ಅಬ್ದುಲ್ ಫಸಲ್‌ರ ಐಸ್-ಎ-ಅಕ್ಬರಿಯಲ್ಲಿ ಉಲ್ಲೇಖವಿದೆ. ಜಹಾಂಗಿರ ರ ಕಾಲದಲ್ಲಿ ಗೋವಧೆಯನ್ನು ಮಾಡಿದವರಿಗೆ ಕಠಿಣವಾದ ಶಿಕ್ಷೆಯನ್ನು ವಿಧಿಸಲಾಗುತ್ತಿತ್ತು ಎಂದು ವಿದೇಶಿ ಯಾತ್ರಿಕ ಬರ್ನಿಯಾರ್ ತನ್ನ ಪುಸ್ತಕದಲ್ಲಿ ಉಲ್ಲೇಖ  ಮಾಡಿದ್ದಾರೆ.

1958 ರಲ್ಲಿ ಸುಪ್ರಿಂಕೋರ್ಟ್ ತೀರ್ಪು ಕೊಡುತ್ತಾ 18ನೇ ಶತಮಾನದಲ್ಲಿ ಮೈಸೂರು ಸಂಸ್ಥಾನದ ಹೈದರಾಲಿಯು ಗೋಹತ್ಯೆ ಮಾಡುವವರ ಕೈ ಕತ್ತರಿಸಿ ಎಂಬ ಫರ್ಮಾನು ಹೊರಡಿಸಿದ್ದರು ಎಂಬುದನ್ನು ಉಲ್ಲೇಖ ಮಾಡುತ್ತದೆ. ಟಿಪ್ಪು ಸುಲ್ತಾನನ ಕಾಲದಲ್ಲಿ ಗೋವಿಗೆ ಗೌರವವಿತ್ತು. ‘ಬೆಣ್ಣೆ ಚಾವಡಿ’ ಎಂಬ ಹಸುವಿಗೆ ಟಿಪ್ಪುರವರು ‘ಅಮೃತ ಮಹಲ್’ ಎಂಬ ಹೆಸರಿಟ್ಟು ಅಮೃತ ಮಹಲ್ ತಳಿಗಳ ರಕ್ಷಣೆಗಾಗಿ ‘ಅಮೃತ ಮಹಲ್ ಕಾವಲು ಭೂಮಿ’ ಎಂದು ಹುಲ್ಲುಗಾವಲನ್ನು ಮಿಸಲಿಟ್ಟಿದ್ದರು. ಈ ರೀತಿ 240 ಹುಲ್ಲುಗಾವಲಿಗಾಗಿ 4 ಲಕ್ಷ ಎಕರೆ ಭೂಮಿ ಮಿಸಲಿಡಲಾಗಿತ್ತು. ಇಂದಿಗೂ ಬಹಳಷ್ಟು ಮುಸಲ್ಮಾನರು ಗೋಮಾಂಸ ಭಕ್ಷಣೆ ಮಾಡುತ್ತಿಲ್ಲ.

ನಮ್ಮ ದೇಶದ ಭಾವನೆಗಳಿಗೆ, ಶ್ರದ್ದೆಗೆ, ನಂಬಿಕೆಗಳಿಗೆ ಗೌರವ ಕೊಟ್ಟವರು ಹಿಂದೂ ಮತ್ತು ಮುಸ್ಲಿಂ ಸಮಾಜ ಅದಕ್ಕಾಗಿಯೇ 1857 ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆಯಿತು. ಸೈನಿಕರು ಬಳಸುವ ಕಾಡತೂಸು ಕೋವಿಗಳಲ್ಲಿ ಬ್ರಿಟೀಷರು ಗೋವಿನ ಮತ್ತು ಹಂದಿಯ ಕೊಬ್ಬನ್ನು ಬಳಸಿದ್ದಾರೆ ಎಂಬ ಕಾರಣವೇ ಸೈನಿಕರಲ್ಲಿ ಕಿಚ್ಚನ್ನು ಹಚ್ಚಿತ್ತು. ಬ್ರಿಟಿಷರ ವಿರುದ್ದ ಮೊದಲ ಹೊರಾಟಕ್ಕೆ ನಾಂದಿಯಾಯಿತು. ಬ್ರ್ರಿಟಿಷರು ಹಿಂದೂಗಳು ಮತ್ತು ಮುಸಲ್ಮಾನರನ್ನು ಒಡೆದು ಆಳಿ ತಮ್ಮ ಸಾಮ್ರಾಜ್ಯವನ್ನು ಭದ್ರ ಮಾಡಿಕೊಳ್ಳುವ ಪ್ರಯತ್ನ ಮಾಡಿದರು. ಇದರ ಪರಿಣಾಮವಾಗಿಯೇ ಅವರು ಮಾಡಿದ ಷಡ್ಯಂತ್ರ ಗೋಹತ್ಯೆ.

1760 ರಲ್ಲಿ ರಾಬರ್ಟ್‌ಕ್ಲೈವ್ ಕೋಲ್ಕತ್ತಾದಲ್ಲಿ ಮೊದಲ ಕಸಾಯಿಖಾನೆಯನ್ನು ಸ್ಥಾಪಿಸಿದ, ಹಿಂದೂಗಳು, ಮುಸಲ್ಮಾನರು ಪರಸ್ಪರ ಇದೇ ಕಾರಣಕ್ಕೆ ಹೊಡೆದಾಡಬೇಕು ಎಂಬ ಷಡ್ಯಂತ್ರ ರೂಪಿಸಿದ. 1862 ರಲ್ಲಿ ಇಂಗ್ಲೆಂಡಿನ ರಾಣಿ ವಿಕ್ಟೋರಿಯಾ ಭಾರತದ ವೈಸರಾಯ್‌ಗೆ ಪತ್ರ ಬರೆದು ಭಾರತದ ಜನರಲ್ಲಿ ಗೋವಿನ ಬಗೆಗಿರುವ ಶ್ರದ್ದೆಗೆ ಕೊಡಲಿ ಪೆಟ್ಟು ಕೊಡಬೇಕೆಂದು ವಿವರಿಸುತ್ತಾರೆ. ದೇಶದ ದುರಾದೃಷ್ಟ ಬ್ರಿಟೀಷರ ಕುತಂತ್ರಕ್ಕೆ ಬಲಿಯಾದ ನಾವು ಇಂದಿಗೂ ಹಿಂದೂಗಳು ಮತ್ತು ಮುಸಲ್ಮಾನರು ಇದೇ ವಿಚಾರಕ್ಕೆ ಕಿತ್ತಾಡುತ್ತಿದ್ದೇವೆ. 1947 ರಲ್ಲಿ ಭಾರತ ಸ್ವತಂತ್ರವಾದಾಗ 300 ಇದ್ದ ಕಸಾಯಿಖಾನೆ ಈಗ 35,000 ಕ್ಕೆ ಏರಿದೆ.

ಸ್ವಾತಂತ್ರ್ಯ ನಂತರ ಶೇಕಡ 80 ರಷ್ಟು ಗೋವಂಶ ನಾಶವಾಗಿದೆ. ಸುಮಾರು 70 ರಷ್ಟಿದ್ದ ವಿವಿಧ ರೀತಿಯ ಗೋತಳಿ 33 ಕ್ಕೆ ಇಳಿದಿದೆ. ಅದರಲ್ಲೂ ಬಹಳಷ್ಟು ತಳಿಗಳು ವಿನಾಶದ ಅಂಚಿನಲ್ಲಿವೆ. 1951 ರಲ್ಲಿ 1000 ಜನ ಸಂಖ್ಯೆಗೆ 430 ಗೋವುಗಳಿದ್ದರೆ 1981 ರಲ್ಲಿ ಇದು 278 ಕ್ಕೆ ಇಳಿಯಿತು. ನೋವಿನ ಸಂಗತಿಯೆಂದರೆ 2001 ರಲ್ಲಿ 1000 ಜನ ಸಂಖ್ಯೆಗೆ 110 ಮಾತ್ರ ಇತ್ತು. 2011 ಕ್ಕೆ ಈ ಸಂಖ್ಯೆ ಕೇವಲ 20 ಕ್ಕೆ ಇಳಿಯುವ ಸಾಧ್ಯತೆ ಇದೆ.

ಭಾರತೀಯರೆಲ್ಲರೂ ಇಂದು ಭವಿಷ್ಯದ ಭಾರತವನ್ನು ಯೋಚನೆ ಮಾಡಬೇಕಿದೆ. ಗೋವಿನ ಗೊಬ್ಬರ, ಗೋವಿನ ಔಷಧಿ, ಬೆಣ್ಣೆ, ತುಪ್ಪ ಬಳಸುತ್ತಿದ್ದ ನಮ್ಮ ಹಿರಿಯರು ಆರೋಗ್ಯವಂತರಾಗಿದ್ದರು, ದಷ್ಟಪುಷ್ಟವಾಗಿದ್ದರು. ಈಗ ನಾವು ಕ್ರಿಮಿನಾಶಕ, ರಸಗೊಬ್ಬರಗಳನ್ನು ಬಳಸಿ ಭೂಮಿಯನ್ನು ವಿಷಮಾಡಿದ್ದೇವೆ. ಭೂಮಿ ಫಲವತ್ತತೆ ಕಳೆದುಕೊಂಡಿದೆ. ಬೆಳೆ ಮತ್ತು ಮಾನವ ನಾನಾ ರೋಗಗಳಿಗೆ ತುತ್ತಾಗುತ್ತಿದ್ದಾನೆ. ನಮ್ಮ ಆರೋಗ್ಯವನ್ನು ಮತ್ತು ಭೂಮಿಯನ್ನು ಉಳಿಸುವ ಸಲುವಾಗಿ ನಾವು ಮತ್ತೇ ಗೋ ಆಧಾರಿತ ಕೃಷಿ ಪದ್ದತಿಗೆ ಹೊಗಲೇ ಬೇಕಾಗಿದೆ.

ಗೋವು ನಿರುಪಯುಕ್ತ ಅನ್ನುವ ಮಾತೇ ಇಲ್ಲ. ಸಾಯುವ ತನಕ ಸೆಗಣಿ ಮತ್ತು ಗೋ ಮೂತ್ರವನ್ನು ಕೊಡುತ್ತದೆ. ಸೆಗಣಿ ಮತ್ತು ಗೋ ಮೂತ್ರದಿಂದ ಹಲವಾರು ರೀತಿಯ ಔಷಧಿಯನ್ನು ತಯಾರು ಮಾಡುತ್ತಿದ್ದಾರೆ. ಕೇವಲ ಹಾಲು ಮಾತ್ರ ಲಾಭದಾಯಕ ಅಲ್ಲ. ಸೆಗಣಿ, ಮೂತ್ರನೂ ಲಾಭದಾಯಕ ಅನ್ನುವುದನ್ನ ಸಾಧಿಸಿ ತೋರಿಸಲಾಗುತ್ತಿದೆ. ಗೋವು ಎಂದೂ ರೈತನಿಗೆ ಅರ್ಥಿಕವಾಗಿ ಹೊರೆಯಾಗುವ ಪ್ರಶ್ನೆ ಇಲ್ಲ. ಗೋವಿನ ಸೆಗಣಿ ಮತ್ತು ಗಂಜಲವನ್ನು ಬಳಸಿಕೊಳ್ಳುವ ಹಲವಾರು ಸಂಘ ಸಂಸ್ಥೆಗಳು, ಮಠ ಮಂದಿರಗಳು, ಉದ್ಯಮಗಳು ದೇಶದಲ್ಲಿ ಆರಂಭವಾಗುತ್ತಿವೆ. ಧಾರ್ಮಿಕ ಭಾವನೆ ಒಂದೆಡೆಯಾದರೆ ಕೃಷಿಯನ್ನು ಉಳಿಸಲು, ಭೂಮಿಯನ್ನು ಉಳಿಸಲು ಈ ಮೂಲಕ ಜನರ ಆರೋಗ್ಯವನ್ನು ಉಳಿಸಲು ಗೋವಂಶ ನಮ್ಮ ರಾಜ್ಯ, ದೇಶಕ್ಕೆ ಅನಿವಾರ್ಯ, ವಿಭಿನ್ಯ ವಿಚಾರಗಳ ಮತ್ತು ಪಕ್ಷಗಳ ಆರೋಪ ಪ್ರತ್ಯಾರೋಪಗಳನ್ನು ಮರೆತು ಇಡಿ ಸಮಾಜದ ಸ್ವಾಸ್ಥ್ಯದ ಬಗ್ಗೆ ಯೋಚನೆ ಮಾಡೋಣ. ಗೋಮಾಂಸ ಸೇವನೆ ಕೆಲವರು ಮಾತ್ರ ಮಾಡುತ್ತಾರೆ ಆದರೆ ಗೋವಿನ ಉಳಿವಿನಿಂದ ಇಡೀ ಸಮಾಜ ಉಳಿಯುತ್ತದೆ. ಭಾವನೆ, ಶ್ರದ್ಧೆ, ಇದಕ್ಕಿಂತಲು ಮಿಗಿಲಾಗಿ ಒಟ್ಟಾರೆ ಸಮಾಜದ ರಕ್ಷಣೆಗಾಗಿ ಒಟ್ಟಾಗಿ ಕುಳಿತು ಚರ್ಚಿಸುವ, ಯೋಚಿಸುವ ಅಗತ್ಯವಿದೆ. ಅಧಿಕಾರ, ಕುರ್ಚಿ ಇಧ್ಯಾವುದೂ ಶಾಶ್ವತವಲ್ಲ. ಸಮಾಜವೇ ಶಾಶ್ವತ.

ಶೋಭಾ

Quotes

We would rather starve thansell our national honor

— Indira Gandhi

Newsletter

Get latest updates of my blog, news, media watch in your email inbox. subscribe to my newsletter