Shobha Karndlaje

Untitled-2

BJP Karnataka

ಎಂಡೋಸಲ್ಫಾನ್‌ನಿಂದ ಅಂಗವಿಕಲರಾದವರಿಗೆ ಪರಿಹಾರ ಕೊಡಿಸಲು ಹೋರಾಟ

1976ನೇ ಇಸವಿಯಿಂದ 2000ದ ತನಕ ದಕ್ಷಿಣ ಕನ್ನಡ ಜಿಲ್ಲೆಯ ಕೊಕ್ಕಡ, ಪಟ್ರಮೆ, ಕೌಕ್ರಾಡಿ, ಕುಂತೂರು ಗ್ರಾಮ ಪಂಚಾಯತ್‌ಗಳಲ್ಲಿ ಸುಮಾರು 800 ಎಕರೆ ಗೇರು ಬೆಳೆಗೆ ಎಂಡೋಸಲ್ಫಾನ್‌ನ್ನು ಹೆಲಿಕಾಪ್ಟರ್‌ನಿಂದ ಸಿಂಪಡಿಸಲಾಯಿತು. ಎಂಡೋಸಲ್ಫಾನ್ ಅನ್ನುವ ಕ್ರಿಮಿನಾಶಕ ಇಷ್ಟೊಂದು ಭಯಾನಕ ಎಂದು ಜನರಿಗೆ ಗೊತ್ತಿಲ್ಲದ ಕಾಲ ಅದು. ಈ ಗ್ರಾಮಗಳ ಸರ್ಕಾರಿ ಗೇರು ತೋಟದ ಗೇರು ಹೂವಿನ ರಕ್ಷಣೆಗಾಗಿ ಸಿಂಪಡಿಸಿದ್ದರೂ ಈ ಔಷಧಿ ಅಲ್ಲಿ ವಾಸಿಸುವ ಜನರ ತೋಟದ ಮೇಲೆ  ಅವರ ತರಕಾರಿ, ಹಣ್ಣುಗಳ ಮೇಲೆ, ಕುಡಿಯುವ ನೀರಿನ ತೆರೆದ ಬಾವಿ ಮೇಲೆ, ಜನರ ಶರೀರದ ಮೇಲೆ ಕೂಡ ಸಿಂಪಡಣೆಯಾಯಿತು. ಔಷಧಿ ಖಾಲಿಯಾದ ಡಬ್ಬಗಳನ್ನು ಮೇಲಿನಿಂದ ಕೆಳಗಿರುವ ನದಿ ಮೇಲೆ ಎಸೆಯಲಾಯಿತ್ತು. ಇದರಿಂದಾಗಿ ನದಿಯಲ್ಲಿರುವ ಮೀನುಗಳು ಸತ್ತು ಹೋದವು. ಸತ್ತ ಮೀನುಗಳನ್ನೆ ಜನ ತಿಂದರು. ಇದು ನಿರಂತರವಾಗಿ 24 ವರ್ಷಗಳ ಕಾಲ ವರ್ಷಕ್ಕೆ ಎರಡು ಬಾರಿಯಂತೆ ನಡೆಯಿತು. ಇದೇ ರೀತಿ ಕಾಸರಗೋಡಿನ ಪಡ್ರೆ ಮತ್ತು ಇನ್ನಿತರ ಗ್ರಾಮಗಳಲ್ಲೂ ನಡೆಯಿತು.

ಮೊದಲ ಬಾರಿಗೆ ಕಾಸರಗೋಡಿನ ಪಡ್ರೆ ಗ್ರಾಮದಲ್ಲಿ ಸಾವಿರಾರು ಜನರು ಅಂಗವಿಕಲರಾಗಿರುವುದು ನಪುಂಸಕರಾಗಿದ್ದು, ಬಂಜೆಯರಾಗಿದ್ದು, ಅತಿ  ಹೆಚ್ಚು ಪ್ರಮಾಣದ ಕ್ಯಾನ್ಸರ್ ರೋಗ ಮತ್ತು ಚರ್ಮ ರೋಗಕ್ಕೆ ತುತ್ತಾಗಿದ್ದು ಕಂಡು ಬಂದು ಜನ ಜಾಗೃತರಾದರು, ಹೋರಾಟ ನಡೆಯಿತು. ವಿಶ್ವ ಸಂಸ್ಥೆಯಿಂದ ಮತ್ತು ಭಾರತದ ಹಲವಾರು ತಜ್ಞರು ಈ ಸ್ಥಳಕ್ಕೆ ಭೇಟಿ ನೀಡಿದರು. ಇದೆಲ್ಲದರ ಪರಿಣಾಮ ಕೇಂದ್ರ ಗೇರು ನಿಗಮ 2000 ನೇ ಇಸವಿಯಿಂದ ಆಕಾಶದಿಂದ ಎಂಡೋಸಲ್ಫಾನ್ ಸಿಂಪಡಣೆಯನ್ನು ನಿಲ್ಲಿಸಿತು. ಕ್ರಮೇಣ ಕೇರಳ ಸರ್ಕಾರ ತನ್ನ ರಾಜ್ಯದಲ್ಲಿ ಎಂಡೋಸಲ್ಫಾನ್‌ನ ಬಳಕೆಯನ್ನು ನಿಷೇಧಿಸಿತು ಮತ್ತು ಕಾಸರಗೋಡು ತಾಲೂಕಿನಲ್ಲಿ ಈ ಗ್ರಾಮಗಳಲ್ಲಿ ಅಂಗವಿಕಲರಾದವರಿಗೆ ಪರಿಹಾರವನ್ನು ಕೊಟ್ಟಿತು.

ನಮ್ಮ ರಾಜ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ತೊಂದರೆಗೊಳಗಾದ ಗ್ರಾಮದ ಜನರು ಹಲವಾರು ಹೋರಾಟಗಳನ್ನು ಮಾಡಿದರು. ಎಲ್ಲಾ ಸರ್ಕಾರಗಳಿಗೂ ಮನವಿಯನ್ನು ಸಲ್ಲಿಸಿದರು. ಆದರೆ ಅವರ ನೋವಿಗೆ ಯಾರೂ ಸ್ಪಂದಿಸಲೇ ಇಲ್ಲ. ಕೇಂದ್ರದ ಎರಡು ಸಮಿತಿಗಳು, ರಾಜ್ಯದ ಸಮಿತಿಗಳು ಭೇಟಿ ನೀಡಿದವು. ಆದರೂ ಪರಿಹಾರ ಮಾತ್ರ ಮರೀಚಿಕೆಯಾಗಿ ಉಳಿಯಿತು. ಧ್ವನಿಯಿಲ್ಲದ ಆ ನೊಂದ ಜನ ಸುಮ್ಮನಾಗಿದ್ದರು.  ಡಿಸೆಂಬರ್ 2009 ರಲ್ಲಿ  ನಾನು ಒಬ್ಬ ಸಾಮಾಜಿಕ ಕಾರ್ಯಕರ್ತೆಯಾಗಿ ಅವರ ನೋವನ್ನು ಹತ್ತಿರದಿಂದ ತಿಳಿದುಕೊಳ್ಳುವ ಪ್ರಯತ್ನ ಮಾಡಿದೆ. ಅವರ ಮನೆಗಳಿಗೆ ಭೇಟಿ ನೀಡಿದಾಗ ಭಯಾನಕ ದೃಶ್ಯ ಕಂಡು ಬಂದವು. ಒಂದೊಂದು ಮನೆಯಲ್ಲೂ ಇಬ್ಬರು, ಮೂವರು ಮಾನಸಿಕ ಮತ್ತು ದೈಹಿಕ ಅಂಗವಿಕಲರು, ಕ್ಯಾನ್ಸರ್ ರೋಗ ಪೀಡಿತರು, ನರ ದೌರ್ಬಲ್ಯಕ್ಕೆ ಒಳಗಾದವರು, ಮಕ್ಕಳಾಗದವರು ಹೀಗೇ ನೂರಾರು ಪ್ರಕರಣಗಳು ಕೇವಲ ಒಂದು ಗ್ರಾಮ ಕೊಕ್ಕಡದಲ್ಲಿ ಕಂಡು ಬಂದವು. ನಾನು ಕಂಡ ದೃಶ್ಯವನ್ನು ಸರ್ಕಾರದ ಗಮನಕ್ಕೆ ತರಬೇಕೆಂದು ಕಳೆದ ಅಧಿವೇಶನದಲ್ಲಿ ಇವರ ಧ್ವನಿಯಾಗಿ ನಾನು ಮಾತನಾಡುವ ಪ್ರಯತ್ನ ಮಾಡಿದೆ. ಇಡೀ ಸದನ ಈ ಸಮಸ್ಯೆಯ ಪರವಾಗಿ ನಿಂತಿತ್ತು.

ಆಡಳಿತ ಪಕ್ಷ, ವಿರೋಧ ಪಕ್ಷದ ಬಹುತೇಕ ಮಂದಿ ಇಂತಹ ಭಯಾನಕ ಕ್ರಿಮಿನಾಶಕದಿಂದಾಗುವ ಪರಿಣಾಮಗಳ ಬಗ್ಗೆ ಗಂಭೀರವಾದ ಚರ್ಚೆ ಮಾಡಿದರು. ಇದರ ಪರಿಣಾಮವಾಗಿ ಮಾನ್ಯ ಮುಖ್ಯ ಮಂತ್ರಿಗಳು ಮೊದಲ ಬಾರಿಗೆ  ಈ ಗ್ರಾಮಗಳಲ್ಲಿರುವ ತೊಂದರೆಗೊಳಗಾದ ಜನರಿಗೆ ಶೇಕಡ 60 ಕ್ಕಿಂತ ಹೆಚ್ಚು ಅಂಗವಿಕಲತೆ ಇದ್ದರೆ ತಲಾ  ರೂ. 50,000 ಪರಿಹಾರಧನ, ಪ್ರತಿ ತಿಂಗಳು 1,000 ರೂಗಳ ಮಾಸಾಶನ ಮತ್ತು ಕೊಕ್ಕಡದಲ್ಲಿ ಅಂಗವಿಕಲರ ಪುನರ್ವಸತಿ ಕೇಂದ್ರವನ್ನು ಸ್ಥಾಪಿಸುವ ಭರವಸೆ ನೀಡಿದ್ದಾರೆ. ಪರಿಹಾರಕ್ಕಾಗಿ 2 ದಿನಗಳ ಹಿಂದೆ ರೂ. 50.00 ಲಕ್ಷಗಳನ್ನು ಮಂಗಳೂರಿನ ಜಿಲ್ಲಾಧಿಕಾರಿಗೆ ಬಿಡುಗಡೆ ಮಾಡಿದ್ದಾರೆ. ಇದೇ ಫೆಬ್ರವರಿ 28ರಂದು ಮಾನ್ಯ ಮುಖ್ಯ ಮಂತ್ರಿಗಳೇ ಖುದ್ದಾಗಿ ಈ ಅಂಗವಿಕಲರಿಗೆ ಪರಿಹಾರ ಚೆಕ್ಕನ್ನು ನೀಡುತ್ತಿರುವುದು ಆ ಜನರ ಕಣ್ಣೀರನ್ನು ಒರಸುವ ಒಂದು ಸಣ್ಣ ಪ್ರಯತ್ನವಾಗಿದೆ.

ನಮ್ಮ ದೇಶದಲ್ಲಿ ಎಂಡೋಸಲ್ಫಾನ್ ಮತ್ತು ಇತರ ಹಲವಾರು ಭಯಾನಕ ಕ್ರಿಮಿನಾಶಕಗಳು ಯಾವುದೇ ಕಡಿವಾಣವಿಲ್ಲದೆ ಮಾರುಕಟ್ಟೆಗೆ ಬರುತ್ತಿವೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ತಮ್ಮದೇ ಆದ ಸಂಶೋಧನಾ ಕೇಂದ್ರಗಳ ನುರಿತ ತಜ್ಞರಿಂದ ಯಾವ ಕ್ರಿಮಿನಾಶಕದಿಂದ ಯಾವ ಅಡ್ಡ ಪರಿಣಾಮ ಆಗುತ್ತದೆ ಎಂಬ ಸಂಶೋಧನೆಯನ್ನು ಈಗಲಾದರೂ ನಡೆಸಬೇಕು. ಎಗ್ಗಿಲ್ಲದೆ ತರಕಾರಿ, ಹಣ್ಣು, ಧಾನ್ಯಗಳಿಗೆ ಕ್ರಿಮಿನಾಶಕ ಬಳಕೆಯಾಗುತ್ತಿದೆ. ಹಣ್ಣು ತರಕಾರಿಯನ್ನು ನೇರವಾಗಿ ಹಾಗೆಯೇ ಸೇವಿಸುತ್ತೇವೆ. ರೈತರು ಯಾವುದೇ ರಕ್ಷಣೆಯಿಲ್ಲದೆ ಔಷಧಿ ಸಿಂಪಡಿಸುತ್ತಾರೆ. ದೇಶದ ಮುಗ್ಧ ರೈತರಿಗೆ ಇದರ ದೂರಗಾಮಿ ಪರಿಣಾಮ ಗೊತ್ತಿಲ್ಲ, ಆದರೆ ದೇಶದಲ್ಲಿರುವ ಸಂಶೋಧನಾ ಕೇಂದ್ರಗಳು ಏನು ಮಾಡುತ್ತಿವೆ ಎಂಬುದು ಜನರಿಗೆ ತಿಳಿದಿಲ್ಲ.

ಪ್ರಪಂಚದ 70ಕ್ಕೂ ಹೆಚ್ಚು ದೇಶಗಳು ಎಂಡೋಸಲ್ಫಾನ್‌ನ ವಿಪರೀತ ಅಡ್ಡ ಪರಿಣಾಮಗಳ ಕಾರಣಕ್ಕಾಗಿ ನಿಷೇಧ ಮಾಡಿವೆ. ಇಂಗ್ಲೆಂಡ್‌ನಲ್ಲಿ ಕಳೆದ ವರ್ಷ ‘ಪ್ಯಾಂಟ್ಸ್ ಡೌನ್’ ಅನ್ನುವ ಹೋರಾಟದ ನಡೆಯಿತು. ಎಂಡೋಸಲ್ಫಾನ್ ಸಿಂಪಡಿಸಿದ ಹತ್ತಿಯಿಂದ ತಯಾರಾದ ಒಳ ಉಡುಪುಗಳಿಂದ ತುರಿಕೆಯಂತಹ ಸಮಸ್ಯೆಗಳು ಕಂಡು ಬಂದ ಕಾರಣ ಅಲ್ಲಿ ಜನ ಅರೆಬತ್ತಲೆಯಾಗಿ ‘ಪ್ಯಾಂಟ್ಸ್ ಡೌನ್’ ಎಂಬ ಹೋರಾಟ ಮಾಡಿದರು. ಇದರ ಪರಿಣಾಮವಾಗಿ ಈ ವರ್ಷದಿಂದ ಕಂಪನಿ ತನ್ನ ಉತ್ಪಾದನೆಯನ್ನು ನಿಲ್ಲಿಸುವ ವಾಗ್ದಾನ ಮಾಡಿದೆ. ಅಮೇರಿಕಾದಲ್ಲಿ ಎಂಡೋಸಲ್ಫಾನ್  ನಿಷೇಧ ಮಾಡಿದ್ದರಿಂದ ಅಲ್ಲಿದ್ದ ಕಂಪನಿ ಭಾರತಕ್ಕೆ ಬಂದು ಇಲ್ಲಿ ತನ್ನ ಉತ್ಪಾದನೆ ಮತ್ತು ಮಾರಾಟವನ್ನು ಆರಂಭಿಸಿದೆ.

ಭಾರತವು ದೊಡ್ಡ ಮಾರುಕಟ್ಟೆ. ಪ್ರಪಂಚದ ಬೇರೆ ದೇಶಗಳಲ್ಲಿ ನಿಷೇಧಿತ ಕ್ರಿಮಿನಾಶಕ, ರಸಗೊಬ್ಬರ, ಮಾನವ ಸೇವಿಸುವ ಮಾತ್ರೆಗಳು ಭಾರತಕ್ಕೆ ಬರುತ್ತಿವೆ. ನಮ್ಮ ಜನರಿಗೆ ವೈಜ್ಞಾನಿಕ ಮಾಹಿತಿಯಿಲ್ಲದೆ ಬಳಕೆ ಮಾಡುತ್ತಾರೆ. ಹೊಸ ಹೊಸ ಕಾಯಿಲೆಗಳು ಬೆಳೆಗೆ ಮತ್ತು ಮಾನವನಿಗೆ ಕಾಣಿಸಿಕೊಳ್ಳುತ್ತಿವೆ. ನಾವು ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಕೇವಲ ಲಾಭದ ಆಸೆಯಿಂದ ಬರುವ ಇಂತಹ ಎಲ್ಲಾ ಕಂಪನಿಗಳು ಮತ್ತು ಅದು ತಯಾರು ಮಾಡುವ ಔಷಧಿಗಳ ಬಗ್ಗೆ ನಿಗಾ ವಹಿಸಬೇಕು. ಸಂಶೋಧನೆಯಾದ ನಂತರವಷ್ಟೇ ಯಾವುದೇ ಔಷಧಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಬೇಕು. ಬೇರೆ ದೇಶಗಳಂತೆ ನಮ್ಮ ದೇಶದಲ್ಲೂ ಮಾನವನ ನರ ನಾಡಿಯನ್ನೆ ಕೊಲ್ಲುವ ಭೀಕರ ಎಂಡೋಸಲ್ಫಾನ್ ನಿಷೇಧವಾಗಬೇಕು. ಇದಕ್ಕೆ ಪರ್ಯಾಯವಾದ ಔಷಧಿಯನ್ನು ಸರ್ಕಾರಗಳು ರೈತರಿಗೆ ಒದಗಿಸಿ ಜನರ, ಪಶುಪಕ್ಷಿಗಳ, ಪರಿಸರದ ರಕ್ಷಣೆಯನ್ನು ಮಾಡಲೇಬೇಕಾದ ಅನಿವಾರ್ಯತೆ ಈಗ ಬಂದಿದೆ.

Quotes

Life has no smooth road for any of us; and in the bracing atmosphere of a high aim the very roughness stimulates the climber to steadier steps, till the legend, over steep ways to the stars, fulfills itself.

— W. C. Doane

Newsletter

Get latest updates of my blog, news, media watch in your email inbox. subscribe to my newsletter